ರಸ್ತೆ ಅಭಿವೃದ್ಧಿಪಡಿಸುವಂತೆ ಸಿಎಂ, ಡಿಸಿಎಂರನ್ನು ಒತ್ತಾಯಿಸಿದ ಕೈ ಶಾಸಕ

dinesh
Published on

ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಧ್ಯದ ತಾಲೂಕು ಮತ್ತು ಜಿಲ್ಲಾ ಕೇಂದ್ರ ಗಳನ್ನೂ ಸಂಪರ್ಕಿಸುವ ಈ ಹಿಂದಿನ ಹೆದ್ದಾರಿಯ ದುರಸ್ತಿ ಮತ್ತು ನಿರ್ವಹಣೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದಿರುವ ಅವರು, ನೂತನ ಎಕ್ಸ್‌ಪ್ರೆಸ್ ರಸ್ತೆಯು ಕಳೆದ ಮಾರ್ಚ್‌ನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡು, ಸಾರ್ವಜನಿಕರು ಟೋಲ್ ಶುಲ್ಕ ಕಟ್ಟಿ ಸದರಿ ರಸ್ತೆಯನ್ನು ಉಪಯೋಗಿಸುತ್ತಿದ್ದಾರೆ. ಹೊಸ ಹೈವೆ ಪ್ರಾರಂಭವಾದ ನಂತರ ಈ ಮೊದಲಿದ್ದ ಬೆಂಗಳೂರು ಮೈಸೂರು ನಡುವಿನ ಹೆದ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಮಾಡಲಾಗಿದ್ದು, ಇದರಿಂದ ರಸ್ತೆಯ ಅಕ್ಕ ಪಕ್ಕ ಗಿಡ ಗಂಟಿಗಳು ಬೆಳೆದಿವೆ. ಇದರಿಂದ ಸಮರ್ಪಕ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ವಿವರಿಸಿದ್ದಾರೆ.
ಕೆಲವು ಕಡೆ ರಸ್ತೆ ಮಧ್ಯ ಹೊಂಡ ಬಿದ್ದಿದ್ದು ಚರಂಡಿಗಳಲ್ಲಿ ಹೂಳು ತುಂಬಿಕೊಂಡಿವೆ. ಇಲ್ಲಿಯೂ ಸಹ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸಲು ಸದರಿ ರಸ್ತೆಯನ್ನೂ ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ನೂತನ ರಸ್ತೆಯ ಆಜುಬಾಜಿನಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆ ಸಂಪೂರ್ಣಗೊಳ್ಳದೆ, ಹಳ್ಳಿಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸಲು ಹಳೆಯ ಹೆದ್ದಾರಿಯನ್ನೇ ಸ್ಥಳೀಯ ಜನ ಅವಲಂಬಿಸಿದ್ದಾರೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net