

ಬೆಳಗಾವಿ: ತಾಲೂಕಿನ ಹೊನಗಾ ಬಳಿಯ ಬೆನ್ನಾಳಿ ಬ್ರಿಜ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರು ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರ ಕೊಲ್ಹಾಪುರ ಬಳಿಯ ಬಾಚಣಿ ಗ್ರಾಮದ ಪಾಂಡುರಂಗ ಜಾಧವ(60) ಮೃತಪಟ್ಟಿದ್ದು, ಇನ್ನೊರ್ವ ಮೃತ ವ್ಯಕ್ತಿಯ ಮಾಹಿತಿ ಇನ್ನೂ ಲಭಿಸಿಲ್ಲ. ಕಾರಿನ ಹಿಂದೆ ಕುಳಿತಿದ್ದ ಬೆಳಗಾವಿ ತಾಲೂಕಿನ ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್, ಕಾರು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಬೆಳಗಾವಿ ಕಡೆಗೆ ಸ್ವಾಮೀಜಿಗಳ ಕಾರು ಹೊರಟಿತ್ತು. ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ಹಠಾತ ನಿಧಾನವಾಗಿದ್ದರಿಂದ ಅದಕ್ಕೆ ಡಿಕ್ಕಿ ಹೊಡೆದಿದೆ. ಅಷ್ಟರಲ್ಲೆ ಹಿಂದಿನಿಂದ ಬರುತ್ತಿದ್ದ ಲಾರಿ ಇವರ ಕಾರಿಗೆ ಗುದ್ದಿದ ಪರಿಣಾಮ ಕಾರಿನ ಚಾಲಕ ಹಾಗೂ ಪಕ್ಕದವ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಿಂದೆ ಕುಳಿತಿದ್ದ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪಿಐ ಸಿನ್ನೂರ, ಕಾಕತಿ ಪಿಎಸ್ಐ ಮಂಜುನಾಥ ಹುಲಕುಂದ, ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಲ ಹೊತ್ತು ಸಂಚಾರ ದಟ್ಟನೆಯಾಗಿತ್ತು.