

ವಿಜಯವಾಣಿ ಸುದ್ದಿಜಾಲ ಎಂ.ಕೆ.ಹುಬ್ಬಳ್ಳಿ
ಹೊಟ್ಟೆ ಪಾಡಿಗಾಗಿ ಕೂಲಿ ಅರಸಿ ಕಲಬುರ್ಗಿಯಿಂದ ಬೆಳಗಾವಿಗೆ ಬಂದಿದ್ದ ಮೂವರು ಕೂಲಿಕಾರ್ಮಿಕರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ, ಮೂವರು ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಇಟಗಿಕ್ರಾಸ್( ದೇವರಶೀಗಿಹಳ್ಳಿ ಕ್ರಾಸ್) ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಭಾನುವಾರ ನಡೆದಿದೆ.
ಕಲಬುರ್ಗಿಯ ರಾಮಪುರ ವಡ್ಡರ ಗಲ್ಲಿಯ ಕೂಲಿ ಕಾರ್ಮಿಕರಾದ ರಾಮಚಂದ್ರ ಮಾರಗಪ್ಪ(45), ಇವರ ಮಗ ಮಹೇಶ ರಾಮಚಂದ್ರ (18) ಮತ್ತು ರಾಮಣ್ಣ (38) ಸ್ಥಳದಲ್ಲೇ ಮತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಲಕ್ಷ್ಮೀಬಾಯಿ ರಾಮಚಂದ್ರ, ಭೀಮಾಭಾಯಿ ರಾಮಣ್ಣ, ಅನುಶ್ರೀ ಅಮಲಯ್ಯ ಹಾಗೂ ಆಯಿಲ್ ಟ್ಯಾಂಕರ್ ಚಾಲಕ ಮಂಗಳೂರು ಮೂಲದ ದಿನೇಶ ಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲು ಛಿದ್ರ: ಸ್ವಚ್ಛತಾ ಕೆಲಸ ಮುಗಿಸಿ ಹಿರೇಬಾಗೇವಾಡಿ ಟೋಲ್ ಕಡೆ ಪ್ರಯಾಣ ಬೆಳೆಸಿದ್ದ ಕಾರ್ಮಿಕರಿದ್ದ ಟಿಪ್ಪರ್ ವಾಹನಕ್ಕೆ ಹಿಂದಿನಿಂದ ವೇಗವಾಗಿ ಬಂದ ಆಯಿಲ್ ಸಾಗಿಸುವ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್‌ನಲ್ಲಿದ್ದ ಕಾರ್ಮಿಕರು ರಸ್ತೆಗೆ ಬಿದ್ದು ಟ್ಯಾಂಕರ್ ಚಕ್ರದಡಿ ಸಿಲುಕಿದ್ದಾರೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಮಾಬಾಯಿ ರಾಮಣ್ಣ ಇವರ ಕಾಲಿನ ಮೇಲೆ ಟ್ಯಾಂಕರ್ ಹರಿದಿದ್ದರಿಂದ ಕಾಲು ಛಿದ್ರವಾಗಿದೆ. ಲಕ್ಷ್ಮೀಬಾಯಿ ರಾಮಚಂದ್ರ, ಅನುಶ್ರೀಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಮಿಕರ ಮೇಲೆ ಹರಿದ ಟ್ಯಾಂಕರ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿ ಹೊಡೆದಿದ್ದು, ಈ ವೇಳೆ ಚಾಲಕ ವಾಹನದಡಿ ಸಿಲುಕಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸಮಯಪ್ರಜ್ಞೆ ಮೆರೆದ ಅಗ್ನಿಶಾಮಕ ದಳ:ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾಣಿಸಿ ಸಂಚಾರ ನಿಯಂತ್ರಿಸಿದರು. ಪಲ್ಟಿಯಾದ ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದ್ದ ಆಯಿಲ್‌ನಿಂದ ಯಾವುದೇ ಅನಾಹುತ ನಡೆಯದಂತೆ ಅಗ್ನಿಶಾಮಕ ದಳ ಸ್ಥಳದಲ್ಲಿದ್ದ ನಿಗಾವಹಿಸಿತು. ಮಂಗಳೂರಿನಿಂದ ಬೆಳಗಾವಿಯ ಕಾಕತಿಗೆ ಗೇರುಬೀಜದ ಆಯಿಲ್ ಸಾಗಿಸುವ ಟ್ಯಾಂಕರ್ ಇದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿ ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ, ಬೈಲಹೊಂಗಲ ಡಿಎಸ್ಪಿ ವೀರಯ್ಯ ಹಿರೇಮಠ, ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐಗಳಾದ ಪ್ರವೀಣ ಗಂಗೋಳ್ಳಿ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.