ಸರಣಿ ಅಪಘಾತ, ಓರ್ವ ಮೃತ್ಯು

Vitla Accident
Published on

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ಭಾನುವಾರ ಪೇಟೆಯುದ್ದಕ್ಕೂ ಮೂರು ವಾಹನಗಳಿಗೆ ಡಿಕ್ಕಿ ಹೊಡೆದು ಜಠಾಧಾರಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.

ಏತಡ್ಕ ನಿವಾಸಿ ಸಂತೋಷ್ ಪ್ರಸಾದ್(26) ಮೃತಪಟ್ಟವರು. ಕಾರು ಚಾಲಕ ಏತಡ್ಕ ಪುತ್ರೋಡಿ ನಿವಾಸಿ ನಾರಾಯಣ ರೈ (34) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾನಮತ್ತರಾಗಿ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಬೊಬ್ಬೆಕೇರಿಯಲ್ಲಿ ಎರಡು ವಾಹನಗಳಿಗೆ ಡಿಕ್ಕಿಯಾದ ಕಾರು, ವಿಟ್ಲ ಪೇಟೆಯಲ್ಲಿ ಒಂದು ವಾಹನಕ್ಕೆ ಡಿಕ್ಕಿ ಹೊಡೆದು ಕಾಸರಗೋಡು ರಸ್ತೆಯಲ್ಲಿ ಸಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಇಳಿಜಾರಿನಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಗಂಭೀರವಾಗಿ ಗಾಯಗೊಂಡ ಸಂತೋಷ್ ಪ್ರಸಾದ್ ಅವರನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅವರು ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಣಕ್ಕೆ ಕುತ್ತು ತಂದ ನಿರ್ಲಕ್ಷೃ: ಕಾರು ಮರಕ್ಕೆ ಡಿಕ್ಕಿಯಾಗುತ್ತಿದ್ದಂತೆ ಚಾಲಕನ ಭಾಗದಲ್ಲಿದ್ದ ಏರ್ ಬ್ಯಾಗ್ ತೆರೆದುಕೊಂಡಿದೆ. ಇದರಿಂದ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ಪಕ್ಕದಲ್ಲಿ ಕುಳಿತಿದ್ದ ಸಂತೋಷ್ ಸೀಟ್ ಬೆಲ್ಟ್ ಹಾಕದ ಕಾರಣ, ಡಿಕ್ಕಿಯ ವೇಗಕ್ಕೆ ಮುಂಭಾಗದ ಗಾಜಿಗೆ ತಲೆ ಬಡಿದಿದೆ. ಇದರಿಂದ ಕುತ್ತಿಗೆಗೆ ಗಾಜು ಕುಯ್ದ ಗಂಭೀರ ಗಾಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net