

ಮಂಗಳೂರು: ಸುರತ್ಕಲ್ ಬಳಿಯ ಹೊಸಬೆಟ್ಟು ಪೆಟ್ರೋಲ್ ಪಂಪ್ ಎದುರು ಶನಿವಾರ ಬೆಳಗ್ಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ತಮಿಳುನಾಡು ಮೂಲದ ಉದ್ಯಮಿ ಅರ್ಜುನ್ (26) ಮೃತಪಟ್ಟವರು. ಶಕ್ತಿನಗರದ ಸಿವಿಲ್ ಇಂಜಿನಿಯರ್ ಅನಿರುದ್ಧ್ ನಾಯರ್ (23) ಹಾಗೂ ಕೇರಳ ಕ್ಯಾಲಿಕಟ್‌ನ ಎಸ್‌ಡಿಎಂ ಕಾನೂನು ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಫಿಜ್ಜಾನ್ (20) ಗಂಭೀರ ಗಾಯಗೊಂಡಿದ್ದಾರೆ.
ಘಟನೆ ವಿವರ: ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಅರ್ಜುನ್ ಚಲಾಯಿಸಿಕೊಂಡು ಬಂದ ಫಾರ್ಚೂನರ್ ಕಾರು ರಸ್ತೆ ಬದಿ ನಿಂತಿದ್ದ ಈಚರ್ ಲಾರಿಯ ಹಿಂಬದಿಗೆ ಹಾಗೂ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದಿದೆ. ಬೆಳಗ್ಗಿನ ಜಾವ 3.30ರ ವೇಳೆಗೆ ಘಟನೆ ನಡೆದಿದೆ. ಮಳೆ ಬರುತ್ತಿದ್ದುದರಿಂದ ವೇಗದ ಚಾಲನೆ ಮಾಡುತ್ತಿದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಚಲಾಯಿಸುತ್ತಿದ್ದ ಅರ್ಜುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್ ಫಿಜ್ಜಾನ್ ಅವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅನಿರುದ್ಧ್ ಅವರ ತಲೆಗೆ ಗುದ್ದಿದ ಗಾಯವಾಗಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕ ಅರ್ಜುನ್ ಅವರ ದೇಹ ಕಾರಿನಲ್ಲಿ ಸಿಲುಕಿಕೊಂಡಿತ್ತು. ಹೊರ ತೆಗೆಯಲು ಸುಮಾರು ಎರಡು ತಾಸು ಪೊಲೀಸರು ಹಾಗೂ ಸಾರ್ವಜನಿಕರು ಹರ ಸಾಹಸಪಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.