ಕಳಪೆ ಕಾಮಗಾರಿಗಳಿಗೆ ಅವಕಾಶವಿಲ್ಲ

1..npk..1
Published on

ಗೋಣಿಕೊಪ್ಪ: ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕಳಪೆಯಾಗಬಾರದು ಎಂದುವಿರಾಜ ಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಲೋಕೋಪಯೋಗಿ ಇಲಾಖೆ ವತಿಯಿಂದ ಪೊನ್ನಂಪೇಟೆ ಕಾನೂರು-ನಿಟ್ಟೂರು ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಂಡ ರಸ್ತೆಯನ್ನು ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಕಳೆಪೆ ಬಗ್ಗೆ ಒಂದು ವೇಳೆ ದೂರು ಬಂದಲ್ಲಿ ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಯಾವುದೇ ಗುತ್ತಿಗೆದಾರರು ಕೆಲಸ ನಿರ್ವಹಿಸುವ ಸಂದರ್ಭ ಎಚ್ಚರಿಕೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಕೆಲಸದತ್ತ ಹೆಚ್ಚಿನ ನಿಗಾ ವಹಿಸಬೇಕು ಎಂದರು. ಈಗಾಗಲೇ ಗುದ್ದಲಿ ಪೂಜೆ ನೆರವೇರಿಸಿದ ಬಹುತೇಕ ಕಾಮಗಾರಿಗಳು ನಿಗದಿತ ಅವಧಿಯ ಒಳಗೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಮಯಕ್ಕೆ ಸರಿಯಾಗಿ ಅತೀ ಹೆಚ್ಚು ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿರುವುದು ಶ್ಲಾಘನೀಯ. ಅಧಿಕಾರಿ ಹಾಗೂ ಗುತ್ತಿಗೆದಾರರು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕಳೆದ ಹಲವು ವರ್ಷಗಳಿಂದ ಈ ಭಾಗದ ಮುಖ್ಯ ರಸ್ತೆ ತೀರಾ ದುಸ್ಥಿತಿಗೆ ತಲುಪಿತ್ತು. ಸಾರ್ವಜನಿಕರ ಓಡಾಟಕ್ಕೆ ಇದರಿಂದ ತೀರಾ ತೊಂದರೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಮುಖ್ಯ ರಸ್ತೆಯ ಅಭಿವೃದ್ಧಿ ಬಗ್ಗೆ ಶಾಸಕರ ಗಮನ ಸೆಳೆದಿದ್ದರು. ಎಇಇ ಲಿಂಗರಾಜು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಕಾನೂರು ಗ್ರಾಪಂ ಸದಸ್ಯರಾದ ಕಾಡ್ಯಮಾಡ ಬೋಪಣ್ಣ, ಜಿಪಂ ಸದಸ್ಯರಾದ ಬಾನಂಡ ಪೃಥ್ವಿ, ತಾಪಂ ಮಾಜಿ ಸದಸ್ಯರಾದ ಪಲ್ವಿನ್ ಪೂಣಚ್ಚ, ಮುಖಂಡರುಗಳಾದ ತೆನ್ನಿರ ಮೈನಾ, ಚೆರಿಯಪಂಡ ನಾಣಯ್ಯ, ಚೇರಂಡ ಮೋಹನ, ಟಿ.ಸಿ.ಶ್ಯಾಮಲಾ, ಮುಳ್ಳಂಗಡ, ಅರಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net