

ಮಡಿಕೇರಿ:
ರಸ್ತೆ ದುರಸ್ತಿಗೆಂದು ಸಾಲು ಸಾಲು ಭೂಮಿಪೂಜೆ ನೆರವೇರಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯವನ್ನು ನಗರಸಭೆ ಮಾಡುತ್ತಿದೆ ಎಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸದಿದ್ದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಹೊಂಡಗುಂಡಿಗಳಾಗಿವೆ, ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳ ಸಂಚಾರಕ್ಕೂ ಅಡಚಣೆಯಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸುವ ಸಂದರ್ಭ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ಚುನಾವಣೆ ಸಮೀಪಿಸಿತು ಎನ್ನುವ ಕಾರಣಕ್ಕೆ ಕೇವಲ ಭೂಮಿಪೂಜೆಗೆ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತಿರುವ ಜನಪ್ರತಿನಿಧಿಗಳು ಗುದ್ದಲಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ.
ರಸ್ತೆಗಳ ಮರು ಡಾಂಬರೀಕರಣಕ್ಕೆ ಕೋಟಿ ಕೋಟಿ ಹಣ ಬಂದಿದೆ ಎಂದು ಹೇಳಿಕೆಗಳನಷ್ಟೇ ನೀಡುತ್ತಿದ್ದಾರೆ. ಆದರೆ ಮರು ಡಾಂಬರೀಕರಣ ಕಾರ್ಯ ಮಾಡದೆ ತೇಪೆ ಹಾಕಲಾಗುತ್ತಿದೆ. ಕಾಂಕ್ರೀಟ್ ರಸ್ತೆಗಳಿಗೂ ಡಾಂಬರಿನ ತೇಪೆ ಹಾಕುವ ಮೂಲಕ ತನ್ನ ಅಭಿವೃದ್ಧಿಯ ವೇಗವನ್ನು ನಗರಸಭೆ ಜನರಿಗೆ ಪ್ರದರ್ಶಿಸುತ್ತಿದೆ ಎಂದು ಟೀಕಿಸಿದ್ದಾರೆ.