ಗ್ರಾಮಸ್ಥರಿಂದಲೇ ಕಾಂಕ್ರಿಟ್ ರಸ್ತೆ ನಿರ್ಮಾಣ

road
Published on

ಮಡಿಕೇರಿ:

ನಮ್ಮೂರಿನಲ್ಲಿ ರಸ್ತೆಯೇ ಸರಿ ಇಲ್ಲ...ಇದು ಕೊಡಗಿನಲ್ಲಿ ಎಲ್ಲಿ ಹೋದರೂ ಸಾಮಾನ್ಯವಾಗಿ ಕೇಳಿ ಬರುವ ದೊಡ್ಡ ಸಮಸ್ಯೆ. ಇದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಬೆನ್ನುಬಿದ್ದು ಬೇಸತ್ತು ಹೋಗಿರುವ ಸಾರ್ವಜನಿಕರು ವ್ಯವಸ್ಥೆಯನ್ನು ಹಳಿಯುತ್ತಾ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ ಮರಗೋಡು ಗ್ರಾ.ಪಂ. ವ್ಯಾಪ್ತಿಯ ಬಿದ್ರುಪಣೆ ಮತ್ತು ಸುತ್ತಲಿನ ಇತರ ಕುಟುಂಬಸ್ಥರು ವಿಭಿನ್ನವಾದ ದಾರಿ ಹಿಡಿಯುವ ಮೂಲಕ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವುದರ ಜತೆಗೆ ಆಡಳಿತಕ್ಕೆ ಗಾಂಧಿಗಿರಿಯ ಬಿಸಿ ಮುಟ್ಟಿಸಿ ಗಮನ ಸೆಳೆದಿದ್ದಾರೆ.

ಮಲೆನಾಡಿನ ಜಿಲ್ಲೆ ಕೊಡಗಿಗೆ ಮಳೆ ಹೊಸದಲ್ಲವಾದರೂ ಈ ವರ್ಷ ಮಳೆಗಾಲದ ಅವಧಿ ವಿಸ್ತರಿಸಿದಂತೆ ಆಗಿರುವುದರಿಂದ ವಿವಿಧ ರೀತಿಯ ಸಮಸ್ಯೆಗಳು ಕಂಡು ಬರುತ್ತಿದೆ. ಮೇ ತಿಂಗಳಿನಲ್ಲೇ ಶುರುವಾಗಿರುವ ಮಳೆಯ ಅಬ್ಬರ ಅಕ್ಟೋಬರ್ 2ನೇ ವಾರದಲ್ಲೂ ಜಿಲ್ಲೆಯ ಹಲವೆಡೆ ಮುಂದುವರಿದಿದೆ. ಇದರಿಂದ ಜಿಲ್ಲೆಯ ಆರ್ಥಿಕತೆಯ ಪ್ರಮುಖ ಮೂಲಕ ಕೃಷಿಗೆ ತೊಂದರೆ ಆಗುತ್ತಿರುವುದು ಒಂದು ಕಡೆಯಾದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಬೆಸೆಯುವ ಜೀವನಾಡಿ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದೆ. ಪ್ರಮುಖ ಊರುಗಳ ನಡುವಿನ ರಸ್ತೆಗಳು ಮಾತ್ರವಲ್ಲದೆ ಗ್ರಾಮೀಣ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ತಲುಪಿವೆ.

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಭಾಗಮಂಡಲ-ತಲಕಾವೇರಿಗೆ ಮಡಿಕೇರಿಯಿಂದ ಸಂಪರ್ಕ ಕಲ್ಪಿಸುವ ರಸ್ತೆ, ಮಡಿಕೇರಿಯಿಂದ ಗೋಣಿಕೊಪ್ಪಲು, ಕುಟ್ಟಕ್ಕೆ ತೆರಳುವ ರಸ್ತೆ, ಸಿದ್ದಾಪುರದಿಂದ ವಿರಾಜಪೇಟೆಗೆ ಹೋಗುವ ರಸ್ತೆ... ಹೀಗೆ ಪ್ರಮುಖ ರಸ್ತೆಗಳಲ್ಲೇ ಗುಂಡಿಗಳ ಮಧ್ಯೆ ರಸ್ತೆ ಹುಡಕಬೇಕಾದ ಸ್ಥಿತಿ ಇದೆ. ಈ ರಸ್ತೆಗಳನ್ನು ಸರಿಪಡಿಸುವಂತೆ ಮಳೆಗಾಲ ಶುರುವಾಗುವ ಮೊದಲೇ ಸಾರ್ವಜನಿಕರು ಒತ್ತಾಯಿಸಿಕೊಂಡು ಬಂದಿದ್ದರು. ಮೊದಲೇ ಹಾಳಾಗಿದ್ದ ರಸ್ತೆಗಳು ಮಳೆಯಿಂದಾಗಿ ಪ್ರಸ್ತುತ ಮತ್ತಷ್ಟು ಕೆಟ್ಟುಹೋಗಿವೆ. ಮಳೆ ನಿಲ್ಲಲಿ ನಂತರ ರಸ್ತೆ ಸರಿಪಡಿಸಲಾಗುವುದು ಎನ್ನುವ ಉತ್ತರ ಈಗ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಬರುತ್ತಿದೆಯೇ ಹೊರತೂ ಯಾವ ಕಾಮಗಾರಿಯೂ ಕಾರ್ಯರೂಪಕ್ಕೆ ಬರುತ್ತಿಲ್ಲ.

ಮಡಿಕೇರಿ ತಾಲೂಕು ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಕಟ್ಟೆಮಾಡು ಜಂಕ್ಷನ್‌ನಿAದ ಬಿದ್ರುಪಣೆ ಐನ್‌ಮನೆಗೆ ತೆರಳುವ ರಸ್ತೆಯೂ ಕೊಡಗಿನ ಇತರ ರಸ್ತೆಗಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಈ ರಸ್ತೆಯೂ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ಇರಲಿ ನಡೆದಾಡಲು ಕೂಡ ಅಸಾಧ್ಯವಾದ ಸ್ಥಿತಿ ತಲುಪಿತ್ತು. ಬಿದ್ರುಪಣೆ, ಕಟ್ಟೆಮನೆ, ಗುಡ್ಡೆಮನೆ, ಹೊಸೋಕ್ಲು, ಪಾರೆಮಜಲು, ಪಾರೆ ಕುಟುಂಬಗಳು ಸೇರಿದಂತೆ 100ಕ್ಕೂ ಅಧಿಕ ಮನೆಗಳಿಗೆ ತೆರಳಬೇಕಾದರೆ ಇದೇ ರಸ್ತೆ ಮೂಲಕ ಹೋಗಬೇಕು. ಬಹುತೇಕ ಎಲ್ಲಾ ಮನೆಗಳಲ್ಲೂ ಒಂದಲ್ಲಾ ಒಂದು ವಾಹನಗಳೂ ಇವೆ. ಆದರೆ ರಸ್ತೆ ದುಸ್ಥಿತಿಯಿಂದಾಗಿ ವಾಹನಗಳಿದ್ದರೂ ಉಪಯೋಗಿಸಲು ಆಗದಂಥ ಪರಿಸ್ಥಿತಿ ನಿರ್ಮಾಣ ಆಗಿತ್ತು.

\ಗ್ರಾಮಸ್ಥರು ಮರಗೋಡು ಗ್ರಾ.ಪಂ. ಗಮನಕ್ಕೆ ವಿಷಯವನ್ನು ತಂದಾಗ ಮೊದಲಿಗೆ ಈ ರಸ್ತೆ ದುರಸ್ತಿಗೆ ಪಂಚಾಯಿತಿಯಲ್ಲಿ ಅನುದಾನ ಇಲ್ಲ ಎನ್ನುವ ಉತ್ತರ ಬಂತು. ಗ್ರಾಮಸ್ಥರು ಮತ್ತಷ್ಟು ಒತ್ತಡ ಹೇರಿದಾಗ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ 1 ಲಕ್ಷ ರೂ. ಅನುದಾನದ ಕೊಡುವ ಭರವಸೆ ಸಿಕ್ಕಿತು. ಆದರೆ ಇದರಿಂದ ಗ್ರಾಮಸ್ಥರಿಗೆ ಸಮಧಾನ ಆಗಿಲ್ಲ. ಪಂಚಾಯಿತಿ ಕೊಡುವ ಅನುದಾನದಲ್ಲಿ 10 ಅಡಿ ಅಗಲಕ್ಕೆ ಹೆಚ್ಚೆಂದರೆ 10-12 ಮೀ. ಮಾತ್ರ ಕಾಂಕ್ರಿಟ್ ರಸ್ತೆ ನಿರ್ಮಿಸಬಹುದು. ಇಷ್ಟು ಕೆಲಸ ಮಾಡಿದರೆ ಗ್ರಾಮಸ್ಥರ ಸಮಸ್ಯೆ ಸಂಪೂರ್ಣ ಪರಿಹಾರ ಆಗುವುದಿಲ್ಲ. ಪ್ರಯೋಜನವೂ ಇಲ್ಲದಂತಾಗುತ್ತದೆ ಎನ್ನುವುದು ಗಮನಕ್ಕೆ ಬಂತು.

ಪಂಚಾಯಿತಿಯಿAದ ಹೆಚ್ಚಿನ ಅನುದಾನ ಸಿಗುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಗ್ರಾಮಸ್ಥರು ಕೈ ಕಟ್ಟಿ ಕೂರಲಿಲ್ಲ. ತಮ್ಮೊಳಗೆಯೇ ಚರ್ಚೆ ಮಾಡಿ ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವುದರೊAದಿಗೆ ಆಡಳಿತ ವ್ಯವಸ್ಥೆಗೆ ಗಾಂಧಿಗಿರಿಯ ಮೂಲಕ ಬಿಸಿಮುಟ್ಟಿಸಲು ನಿರ್ಧರಿಸಿದರು. ಗ್ರಾಮ ಪಂಚಾಯಿತಿಯ 1 ಲಕ್ಷ ರೂ. ಅನುದಾನ ಬಳಸಿಕೊಳ್ಳುವುದರ ಜತೆಗೆ ಬಿದ್ರುಪಣೆ ಮತ್ತು ಅಕ್ಕಪಕ್ಕದ ಕುಟುಂಬಸ್ಥರು ವಂತಿಗೆ ಹಾಕಿ ತಮ್ಮ ಮನೆಗಳಿಗೆ ತೆರಳಲು ತಾವೇ ರಸ್ತೆ ನಿರ್ಮಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡರು.

ರಸ್ತೆ ದುರಸ್ತಿ ಅಥವಾ ನಿರ್ಮಾಣಕ್ಕೆ ಅಧಿಕಾರಿಗಳು ಮಳೆಯ ನೆಪ ಹೇಳುತ್ತಿದ್ದರು. ಆದರೆ ಬಿದ್ರುಪಣೆ ಮತ್ತು ಅಕ್ಕಪಕ್ಕದ ಕುಟುಂಬಸ್ಥರು ಮಳೆಯ ಮಧ್ಯೆಯೇ ಅತ್ಯುತ್ತಮ ದರ್ಜೆಯ ಸುಸಜ್ಜಿತ ಕಾಂಕ್ರಿಟ್ ರಸ್ತೆಯನ್ನು ಈಗ ನಿರ್ಮಿಸಿಕೊಂಡಿದ್ದಾರೆ. ಪಂಚಾಯಿತಿ ಅನುದಾನದಲ್ಲಿ 10 ಅಡಿ ಅಗಲದಲ್ಲಿ ನಿರ್ಮಾಣ ಆಗುತ್ತಿದ್ದ ರಸ್ತೆ ಗ್ರಾಮಸ್ಥರೇ ನಿರ್ಮಾಣ ಮಾಡಿದ್ದರಿಂದ 12 ಅಗಲಕ್ಕೆ ವಿಸ್ತರಿಸಿದೆ. ಒಟ್ಟು 2.5 ಲಕ್ಷ ರೂ. ವೆಚ್ಚದಲ್ಲಿ 45 ಮೀಟರ್ ಉದ್ದದ ಗುಣಮಟ್ಟದ ರಸ್ತೆಯನ್ನು ನಿರ್ಮಿಸಿಕೊಳ್ಳುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಮೂರು ದಿನಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿದಿದೆ. ಇದೀಗ 10 ದಿನಗಳ ಕಾಲ ಕ್ಯೂರಿಂಗ್‌ಗೆ ಬಿಡಲಾಗಿದೆ. ಒಮ್ಮೆ ಕ್ಯೂರಿಂಗ್ ಆದ ನಂತರ ಬಿದ್ರುಪಣೆ ಮತ್ತು ಅಕ್ಕಪಕ್ಕದ ಕುಟುಂಬಸ್ಥರು ತಾವೇ ವಂತಿಗೆ ಹಾಕಿ ತಮ್ಮ ಮನೆಗಳಿಗೆ ತೆರಳಲು ನಿರ್ಮಿಸಿರುವ ರಸ್ತೆಯಲ್ಲಿ ಹೆಮ್ಮೆಯಿಂದ ತಿರುಗಾಡಲಿದ್ದಾರೆ.

ಕಟ್ಟೆಮಾಡು ಜಂಕ್ಷನ್‌ನಿAದ ಬಿದ್ರುಪಣೆ ಐನ್‌ಮನೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ರಸ್ತೆ ಬಿದ್ರುಪಣೆ, ಕಟ್ಟೆಮನೆ, ಗುಡ್ಡೆಮನೆ, ಹೊಸೋಕ್ಲು, ಪಾರೆಮಜಲು, ಪಾರೆ ಕುಟುಂಬಗಳು ಸೇರಿದಂತೆ 100ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿದೆ. ಸ್ಥಳೀಯ ಮರಗೋಡು ಪಂಚಾಯಿತಿ ಗಮನಕ್ಕೆ ತಂದಾಗ ಹಣವಿಲ್ಲದ ಕಾರಣ ಕೇವಲ 1 ಲಕ್ಷ ರೂ. ಅನುದಾನ ಕೊಡುವುದಾಗಿ ಹೇಳಿದರು. ಆದರೆ ಈ ಮೊತ್ತದಿಂದ ನಮ್ಮ ಸಮಸ್ಯೆ ಪರಿಹಾರ ಆಗುವ ರೀತಿಯಲ್ಲಿ ರಸ್ತೆ ನಿರ್ಮಾಣ ಆಗುತ್ತಿರಲಿಲ್ಲ. ಹಾಗಾಗಿ ನಾವುಗಳೇ ನಮ್ಮ ಸ್ವಂತ ಹಣ ಹಾಕಿ ಅತ್ಯುತ್ತಮ ದರ್ಜೆಯ ಕಾಂಕ್ರಿಟ್ ರಸ್ತೆಯನ್ನು ಮಾಡಿಸಿಕೊಂಡಿದ್ದೇವೆ.

ಬಿದ್ರುಪಣೆ ಮನುಮೋಹನ್, ಗ್ರಾ.ಪಂ. ಮಾಜಿ ಸದಸ್ಯ, ಮರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net