ಸಂಭ್ರಮದ ಉತ್ಸವಗಳಿಗೆ ಗುಂಡಿ ಬಿದ್ದ ರಸ್ತೆಯ ಸ್ವಾಗತ

road
Published on

ಮಡಿಕೇರಿ:

ಇನ್ನು ಒಂದು ವಾರದಲ್ಲಿ ದಸರಾ ಶುರುವಾಗುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ಪ್ರಮುಖ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲು ಪಾಲಿಗೆ ಇದು ಅತ್ಯಂತ ಸಂಭ್ರಮದ ದೊಡ್ಡ ಹಬ್ಬ. ಕೊಡಗಿನ ಕಡೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಂದರ್ಭವೂ ಹೌದು. ದಸರಾ ನೆಪದಲ್ಲಿ ಕೊಡಗಿನಲ್ಲಿ ವಾಣಿಜ್ಯ ಚಟುವಟಿಕೆಗಳೂ ಗರಿಗೆದರುತ್ತದೆ.

ಮತ್ತೊಂದು ಕಡೆ ಕಾವೇರಿ ತುಲಾಸಂಕ್ರಮಣ ಜಾತ್ರೆ, ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಇದು ಕೂಡ ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುವ ಧಾರ್ಮಿಕ ಮಹತ್ವದ ಜಾತ್ರೆ. ಒಂದು ತಿಂಗಳ ಕಾಲ ಜಾತ್ರೆಯ ಆಚರಣೆಗಳು ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕಂಡುಬರುತ್ತದೆ.

ದಸರಾ ಮತ್ತು ಕಾವೇರಿ ತೀರ್ಥೋದ್ಭವ, ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಕೊಡಗು, ಕೊಡಗು ಮೂಲದವರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳು, ಹೊರರಾಜ್ಯದಿಂದಲೂ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ. ಆದರೆ ಇಲ್ಲಿಯ ರಸ್ತೆಗಳು ಮಾತ್ರ ಇವರನ್ನೆಲ್ಲಾ ಸ್ವಾಗತಿಸುವ ಸ್ಥಿತಿಯಲ್ಲಿ ಇಲ್ಲ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೇ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ. ದಶಮಂಟಪಗಳು, ಕರಗಗಳು ಸಂಚರಿಸಲು ಕೂಡ ಈ ರಸ್ತೆಗಳು ಯೋಗ್ಯವಾಗಿಲ್ಲ. ಸಾಕಷ್ಟು ಬಾರಿ ಸಾರ್ವಜನಿಕರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ದಸರಾಕ್ಕೆ ಇರುವ ಯಾವುದೇ ಸಿದ್ಧತೆಗಳು ನಡೆದಿಲ್ಲ.

ಮಡಿಕೇರಿಯಿಂದ ಭಾಗಮಂಡಲವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕೊಡಗಿನ ಎಲ್ಲಾ ರಸ್ತೆಗಳೂ ಸಂಪೂರ್ಣ ಹದಗೆಟ್ಟುಹೋಗಿದೆ. ಸಂಬAಧಿಸಿದ ಇಲಾಖೆ ಅಧಿಕಾರಿಗಳು ಮಳೆಯ ಕಡೆಗೆ ಕೈ ತೋರಿಸುತ್ತಿದ್ದಾರೆಯೇ ಹೊರತೂ ಪರ್ಯಾಯ ಪರಿಹಾರೋಪಾಗಳ ಬಗ್ಗೆ ಯೋಚಿಸುತ್ತಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಗುಣಮಟ್ಟದ ಕಾಮಗಾರಿಗಳು ನಡೆದರೆ ಮಾತ್ರ ರಸ್ತೆಗಳು ಗುಂಡಿ ಬೀಳುವುದಿಲ್ಲ. ಈಗಂತೂ ಜಿಲ್ಲೆಯ ರಾಜ್ಯ ಹೆದ್ದಾರಿಗಳು ಗುಂಡಿ ಬಿದ್ದಿವೆ. ಕೆಲವು ಕಡೆ ಬಾಳೆಗಿಡ ನೆಡಬಹುದು. ನಿಗದಿತ ಸಮಯದಲ್ಲೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸಬೇಕು. ಕಳೆಪೆ ಕಾಮಗಾರಿ ನಡೆಸುವವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮಳೆ ನಿಂತಿದೆ ಮೊದಲು ರಸ್ತೆ ಗುಂಡಿ ಮುಚ್ಚಿ.

ಉತ್ತಯ್ಯ, ಕೃಷಿಕ, ಇನಕನಹಳ್ಳಿ ಗ್ರಾಮ

ಜಿಲ್ಲೆಯಲ್ಲಿ ನಡೆಯುವ ದಸರಾ, ತಲಾಕಾವೇರಿ ತೀರ್ಥೋದ್ಭವಕ್ಕೆ ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಬೇಕು. ಲೋಕೋಪಯೋಗಿ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಪ್ರವಾಸಿಗರಿಗೆ ಕೊಡಗಿನ ಒಳ್ಳೆಯ ಅಭಿಪ್ರಾಯ ಬರಬೇಕು. ಗುಂಡಿ ಬಿದ್ದ ರಸ್ತೆಗಳಿಂದ ತೊಂದರೆಯಾಗಬಾರದು.

ಪಾರ್ವತಿ ವಿಜೇತ್, ಗೃಹಿಣಿ, ಸೋಮವಾರಪೇಟೆ

ಜಿಲ್ಲೆಯಲ್ಲಿ ಮುಖ್ಯ ರಸ್ತೆಗಳನ್ನು ಒಳಗೊಂಡAತೆ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ನಿಂತಿದೆ. ಮಳೆ ಬಂದರೆ ಕೆಸರು, ಬಿಸಿಲು ಬಂದರೆ ಧೂಳು ಎನ್ನುವ ಸ್ಥಿತಿ ತಲೆದೋರಿದೆ. ಮಳೆಗಾಲದ ಆರಂಭಕ್ಕೂ ಮೊದಲು ಗುಂಡಿಗಳನ್ನು ಮುಚ್ಚದ ಕಾರಣ ರಸ್ತೆಗಳು ಇಷ್ಟೊಂದು ಹದಗೆಟ್ಟಿವೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಸರ್ಕಾರ, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಆದಷ್ಟು ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಬಿ.ಎಸ್. ಭಗವಾನ್, ವಿರಾಜಪೇಟೆ.

ಕೊಡಗಿನ ಜನ ಸ್ವಾಭಿಮಾನಿಗಳು. ಅವರು ಬೇರೆ ಸೌಲಭ್ಯಗಳಿಗಾಗಿ ಸರ್ಕಾರದ ಹತ್ತಿರ ಕೈ ಚಾಚುವುದು ಕಡಿಮೆ. ಆದರೆ ಗುಡ್ಡಗಾಡು ಪ್ರದೇಶವಾದ ಕೊಡಗಿನ ಜನ ಬಯಸುವುದು ಸರ್ವ ಋತು ರಸ್ತೆ ಸಂಪರ್ಕವನ್ನು ಮಾತ್ರ. ದುರಂತವೆAದರೆ ಕೊಡಗಿನ ಯಾವ ರಸ್ತೆಗಳೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಹಾಗೂ ಮಡಿಕೇರಿಯಲ್ಲಿ ರಾತ್ರಿ ಹೊತ್ತಿನಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ಲಕ್ಷಾಂತರ ಜನ ಬರುವುದರಿಂದ ಈ ಸಂದರ್ಭದಲ್ಲಿ ಆದರೂ ಕೊಡಗಿನ ರಸ್ತೆಗಳಿಗೆ ಮುಕ್ತಿ ಕರುಣಿಸಲಿ.

ಪಟ್ಟಡ ಶಿವಕುಮಾರ್, ಮದೆನಾಡು

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275 ಅಂದಾಜು 16 ಕಿಮೀ ಏರು, ಪೇರು, ತಿರುವುಗಳಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ಅತೀ ಸೂಕ್ಷ್ಮ ತಿರುವುಗಳಲ್ಲಿ ಕಾಡು ಗಿಡ ಗಂಟಿಗಳು ಬೆಳೆದು ನಿಂತಿದೆ. ಇದರಿಂದ ಮುಂಭಾಗದಿAದ ಆಗಮಿಸುವ ವಾಹನಗಳು ಸರಿಯಾಗಿ ಗೋಚರಿಸದೆ ಅಪಘಾತಗಳು ಸಂಭವಿಸುತ್ತಿದೆ. ಕೆಲವು ಭಾಗಗಳಲ್ಲಿ ರಸ್ತೆಯ ಮೇಲೆಯೇ ಮಳೆ ನೀರು ಹರಿಯುವುದರಿಂದ ಸಂಪೂರ್ಣ ಹದಗೆಟ್ಟಿದೆ. ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳು ಹೊಂಡ, ಗುಂಡಿಗಳಿAದ ಕೂಡಿದ್ದು ಪ್ರವಾಸಿಗರ ವಾಹನಗಳು ಪ್ರವಾಸಿ ತಾಣಗಳಿಗೆ ತೆರಳಿದರೆ ವಾಹನವೇ ದುರಸ್ತಿಗೀಡಾಗುವುದು ಖಚಿತ.

ಒ.ಜಿ. ಮಣಿ, ಕೆದಕಲ್ ಗ್ರಾಮಸ್ಥ

ಕೊಡಗು ಒಂದು ಪ್ರವಾಸಿ ತಾಣವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಾಹನಗಳ ಸಂಚಾರವೂ ಹೆಚ್ಚಾಗುತ್ತಿದೆ. ಕೊಡಗಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಸ್ಥಳೀಯ ಆಡಳಿತ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಈ ಸಂಬAಧ ಹಲವಾರು ಬಾರಿ ಮನವಿ ಮಾಡಿದರೂ ರಸ್ತೆಯ ಸ್ಥಿತಿ ಇನ್ನೂ ಹಾಗೆಯೇ ಇದೆ.

ಪದ್ಮೇಶ್, ಮಾಜಿ ಅಧ್ಯಕ್ಷ, ಆಟೋ ಸಂಘ, ಮಾಲ್ದಾರೆ

ಕಾವೇರಿ ಜಾತ್ರೋತ್ಸವ ಇನ್ನೊಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚು ಆಗಮಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಅನೇಕ ಪ್ರಮುಖ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಮುಂದೆ ತೊಂದರೆ ಆಗಲಿದೆ. ಇದೀಗ ಮಳೆ ಬಿಟ್ಟಿರುವುದರಿಂದ ರಸ್ತೆ ಕೆಲಸ ಮಾಡಿ ಮುಗಿಸುವುದು ಒಳ್ಳೆಯದು.

ಕೋಮಲ, ಶಿಕ್ಷಕಿ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಶನಿವಾರಸಂತೆ

ಕಾವೇರಿ ಜಾತ್ರೋತ್ಸವ ಸೇರಿದಂತೆ ದಸರಾ ಹಾಗೂ ಇನ್ನಿತರ ಹಬ್ಬಗಳು ಸಮೀಪಿಸುತ್ತಿದೆ. ಹಾಗಾಗಿ ಜಿಲ್ಲೆಗೆ ಪ್ರವಾಸಿಗರು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಜಿಲ್ಲೆಯ ಅನೇಕ ಪ್ರಮುಖ ರಸ್ತೆಗಳ ಸ್ಥಿತಿ ನೋಡಿದರೆ ಆ ದೇವರಿಗೇ ಪ್ರೀತಿ ಆಗಬೇಕು. ಗುಂಡಿಯಲ್ಲಿ ರಸ್ತೆಯಲ್ಲಿ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಈ ಸರ್ಕಾರದಿಂದ ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ನಿರೀಕ್ಷೆ ಮಾಡುವುದು ಕಷ್ಟ.

ಬಿ.ಎಸ್. ಅನಂತ್ ಕುಮಾರ್, ಸಮಾಜ ಸೇವಕ, ಶನಿವಾರಸಂತೆ

ದಸರಾ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಆದರೆ ರಸ್ತೆ ಮಾತ್ರ ಇನ್ನು ಗುಂಡಿ ಬಿದ್ದುಕೊಂಡೇ ಇದೆ. ಮಳೆ ಕೂಡ ಕಡಿಮೆ ಆಗಿಲ್ಲ. ಈ ಹಿನ್ನೆಲೆ ಜಿಲ್ಲೆಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರಿಗೆ ತೊಂದರೆಯಾಗಲಿದೆ. ಈಗಾಗಲೇ ರಸ್ತೆ ದುರಸ್ತಿ ಆಗಿರಬೇಕಿತ್ತು. ಇನ್ನು ಮಾಡಿದರೂ ತೇಪೆ ಹಾಕಿ ಗುಂಡಿ ಮುಚ್ಚುತ್ತಾರೆ. ಕೆಲವು ವಾರದ ನಂತರ ಮತ್ತೆ ಅದೇ ಸ್ಥಿತಿ ಇರಲಿದೆ. ರಸ್ತೆಗಳಿಗೆ ಶಾಶ್ವತ ಪರಿಹಾರ ಸಿಗಲಿ.

ನಾಟೋಳಂಡ ಗಿರೀಶ್, ಗೋಣಿಕೊಪ್ಪಲು ನಿವಾಸಿ

ಮಡಿಕೇರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು 10 ಲಕ್ಷ ರೂ. ಮೊತ್ತದ ಟೆಂಡರ್ ಆಗಿದೆ. ಕಾರ್ಯಾದೇಶವನ್ನೂ ನೀಡಲಾಗಿದೆ. ಕೆಲಸ ಮಾಡಲು ಗುತ್ತಿಗೆದಾರರೂ ತಯಾರಾಗಿ ಎಲ್ಲ ಪರಿಕರಗಳೊಂದಿಗೆ ಬಂದಿದ್ದಾರೆ. ಆದರೆ, ಶನಿವಾರ ಮತ್ತೆ ಮಳೆ ಸುರಿದಿದೆ. ಇದರಿಂದ ನೀರಿನ ತೇವಾಂಶ ಹೆಚ್ಚಾಗಿದೆ. ಗುಂಡಿಗಳಲ್ಲಿ ನೀರು ನಿಂತಿದೆ. ಈಗ ಗುಂಡಿ ಮುಚ್ಚಿದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಾಗಿ, ತೇವಾಂಶ ಹೋಗಿ, ಗುಂಡಿ ಒಣಗಲಿ ಎಂದು ಕಾಯುತ್ತಿದ್ದೇವೆ. ಸ್ವಲ್ಪ ಬಿಸಿಲು ಬಂದರೂ ಸಾಕು, ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು.

ಎಚ್.ಆರ್. ರಮೇಶ್, ಪೌರಾಯುಕ್ತ, ನಗರಸಭೆ, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net