

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ನೀಡವಂದ ಗ್ರಾಮದ ಪುಟ್ಟೇಗೌಡ ಕುಟುಂಬ ಮತ್ತು ಚೇರ್ಮನ್ ಕೆಂಪೇಗೌಡ ಕುಟುಂಬದವರು ಅವರದೇ ಜಮೀನಿನಲ್ಲಿ 15 ಅಡಿ ಜಾಗವನ್ನು ಸಾರ್ವಜನಿಕ ರಸ್ತೆಗೆ ದಾನವಾಗಿ ನೀಡುವ ಮೂಲಕ ಪ್ರಾಣಪಣಕ್ಕಿಟ್ಟು ರೈಲ್ವೇ ಹಳಿ ದಾಟುವ ಸಾರ್ವಜನಿಕರ ಸಂಕಷ್ಟವನ್ನು ದೂರ ಮಾಡಿದ್ದಾರೆ.
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ರೈಲ್ವೇ ಇಲಾಖೆ ನಡೆಸಿರುವ ಭೂಸ್ವಾಧೀನ ಪ್ರಕ್ರಿಯೆ ಮೂರು ಗ್ರಾಮಗಳ ಜನರ ಪ್ರಾಣಕ್ಕೆ ಉರುಳಾಗಿ ಪರಿಣಮಿಸಿದೆ. ಸಾರ್ವಜನಿಕ ರಸ್ತೆ ಸ್ವಾಧೀನದಿಂದಾಗಿ ಮೂರು ಗ್ರಾಮಗಳ ಜನರು ಪ್ರತಿನಿತ್ಯ ರೈಲ್ವೇ ಹಳಿ ದಾಟುವುದು ಅನಿವಾರ್ಯವಾಗಿದ್ದು, ಪ್ರಾಣವನ್ನು ಪಣಕ್ಕಿಡುವಂತಾಗಿದೆ. ಶಾಲೆಗಳಿಗೆ ಹೋಗುವ ಪುಟ್ಟಮಕ್ಕಳು ಸೇರಿ ಹಿರಿಯ ನಾಗರಿಕರು ಪ್ರತಿದಿನ ಪ್ರಾಣಭೀತಿ ಎದುರಿಸುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು.
ಪರ್ಯಾಯ ರಸ್ತೆಗೆ ಸೂಚನೆ: ಶಾಸಕ ಎನ್.ಶ್ರೀನಿವಾಸ್ ನೆಲಮಂಗಲ ತಹಸೀಲ್ದಾರ್ ಮಲ್ಲೇಶ್‌ಬೀರಪ್ಪ ಹಾಗೂ ಮುಖಂಡ ಕೆ.ಗೋವಿಂದರಾಜ್ ಅವರ ಗಮನಕ್ಕೆ ತಂದು ಪರ್ಯಾರ ರಸ್ತೆ ಮಾಡಲು ಸೂಚನೆ ನೀಡಿದ್ದರು,ಈ ಹಿನ್ನೆಲೆಯಲ್ಲಿ ಅಲ್ಪಯ್ಯನಪಾಳ್ಯ, ರಾಜನಪಾಳ್ಯ, ಹೊಸಹಳ್ಳಿಪಾಳ್ಯ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದರು.
ವರದಿ ಪರಿಣಾಮ: ಪ್ರಾಣಪಣಕ್ಕಿಟ್ಟು ರೈಲ್ವೇ ಹಳಿ ದಾಟುವ ಸ್ಥಿತಿ ಶೀರ್ಷಿಕೆಯಡಿ ವಿಜಯವಾಣಿ ಅ.31ರಂದು ವಿಸ್ತಾರವಾಗಿ ವರದಿ ಪ್ರಕಟಿಸಿತ್ತು. ರೈಲ್ವೇ ಇಲಾಖೆ ಭೂಸ್ವಾಧೀನದಿಂದ ಮೂರು ಗ್ರಾಮಗಳ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನೀಡವಂದ ಗ್ರಾಮದ ಪುಟ್ಟೇಗೌಡ ಕುಟುಂಬ ಮತ್ತು ಚೇರ್ಮನ್ ಕೆಂಪೇಗೌಡ ಕುಟುಂಬದವರು ತಮ್ಮ ಜಮೀನಿನಲ್ಲಿ ರಸ್ತೆಗೆ ಜಾಗ ಬಿಟ್ಟುಕೊಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.