ಭಾಗಮಂಡಲ - ತಲಕಾವೇರಿ ರಸ್ತೆ ಅಧ್ವಾನ

road
Published on

ಮಡಿಕೇರಿ:

ಜಿಲ್ಲೆಯ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯನ್ನು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದಿನಂಪ್ರತಿ ಸಾವಿರಾರು ಭಕ್ತರು ಮತ್ತು ಸ್ಥಳೀಯರು ಓಡಾಡುವ ಈ ಮಾರ್ಗದಲ್ಲಿ ಕನಿಷ್ಠ ಗುಂಡಿ ಮುಚ್ಚುವ ಕೆಲಸವೂ ನಡೆದಿಲ್ಲ. ಈ ಮಧ್ಯೆ ಮೇ ತಿಂಗಳಿನಲ್ಲಿ ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ 4 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಯ ಮರು ನಿರ್ಮಾಣ ಕಾಮಗಾರಿಗೆ ಗುದ್ದಿಲಿಪೂಜೆಯನ್ನೂ ನೆರವೇರಿಸಿದ್ದರು.

ಕೊಡಗು ಈ ವರ್ಷ ಭಾರಿ ಮಳೆಗೆ ಸಾಕ್ಷಿಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಜೀವನದಿ ಕಾವೇರಿಯಲ್ಲಿ ಸಾಕಷ್ಟು ನೀರು ಕೆಆರ್‌ಎಸ್ ಸೇರಿ ರಾಜ್ಯದ ಸಮೃದ್ಧಿಯ ಸಂಕೇತ ರವಾನಿಸಿದೆ. ಆದರೆ ಮಳೆಯ ಕಾರಣದಿಂದ ಜಿಲ್ಲೆಯ ಜನತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸಿಗೆ ನೀರು ಜಾಸ್ತಿ ಆಗಿ ಕೊಳೆಯುವಿಕೆ ಸೇರಿದಂತೆ ಬೇರ ಬೇರೆ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಇವೆಲ್ಲಕ್ಕಿಂತ ಪ್ರಮುಖವಾಗಿ ಇಲ್ಲಿಯ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲಕ್ಕೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸಂಪರ್ಕ ಕಲ್ಪಿಸುವ ಮಹತ್ವದ ರಸ್ತೆಯಲ್ಲೇ ವಾಹನಗಳು ಓಡಾಡದ ಸ್ಥಿತಿ ಇದೆ ಎಂದಾದರೆ ಉಳಿದ ಭಾಗಗಳಲ್ಲಿನ ಪರಿಸ್ಥಿತಿ ಊಹಿಸಬಹುದು.

ಮಡಿಕೇರಿ-ಭಾಗಮಂಡಲ ರಸ್ತೆ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಹಾಗೂ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಮಾತ್ರ ಸಂಪರ್ಕ ಕಲ್ಪಿಸುವುದಿಲ್ಲ. ಇದು ಕೇರಳಕ್ಕೆ ತೆರಳಲು ಇರುವ ಪ್ರಮುಖ ಅಂತಾರಾಜ್ಯ ರಸ್ತೆಯೂ ಆಗಿದೆ. ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿ 275ರಲ್ಲಿ ಸಮಸ್ಯೆ ಉಂಟಾಗಿ ವಾಹನ ಸಂಚಾರ ಅಸಾಧ್ಯ ಎನ್ನುವ ಸ್ಥಿತಿ ಉದ್ಭವವಾದಾಗ ಕರಿಕೆ ಮೂಲಕ ಮಂಗಳೂರಿಗೆ ಸಂಪರ್ಕ ಸಾಧಿಸಲು ಕೂಡ ಈ ರಸ್ತೆ ಬಳಕೆ ಆಗುತ್ತದೆ. ಈ ಭಾಗದ ಹಲವು ಹಳ್ಳಿಗಳನ್ನು ಜಿಲ್ಲಾ ಕೇಂದ್ರ ಮಡಿಕೇರಿ ಜತೆ ಬೆಸೆಯುವುದು ಕೂಡ ಇದೇ ರಸ್ತೆಯೇ ಆಗಿದೆ.

ಬೆಟಗೇರಿ ಮೂಲಕ ಕೊಟ್ಟಮುಡಿ, ಎಮ್ಮೆಮಾಡು, ನಾಪೋಕ್ಲು, ಕಕ್ಕಬ್ಬೆ, ಪಾರಾಣೆ, ನೆಲಜಿ, ಬಲ್ಲಮಾವಟಿ ಅಯ್ಯಂಗೇರಿ ಮತ್ತಿತರ ಭಾಗಗಳಿಗೆ ಹೋಗುವವರೂ ಈ ರಸ್ತೆಯ ದುಸ್ಥಿತಿಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಅದರಲ್ಲೂ ಭಾಗಮಂಡಲ, ಕರಿಕೆ, ನಾಪೋಕ್ಲು ಮತ್ತಿತರ ಭಾಗಗಳಿಂದ ಆಸ್ಪತ್ರೆ ಮತ್ತಿತರ ಕೆಲಸಗಳಿಗೆ ಬರುವವರ ಪಾಡು ಹೇಳತೀರದಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಈ ವ್ಯಾಪ್ತಿಗೆ ತೆರಳಲು ಆಂಬುಲೆನ್ಸ್ ಚಾಲಕರು ನಿರಾಕರಿಸುವ ಸ್ಥಿತಿ ಇದೆ. ಇದರಿಂದಾಗಿ ಆನೆ ದಾಳಿ, ರಸ್ತೆ ಅಪಘಾತಯಂಥ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಬೇಕಾದಂಥ ರೀತಿಯ ಸಾಕಷ್ಟು ತುರ್ತು ಸಂದರ್ಭಗಳಲ್ಲಿ ಸ್ಥಳೀಯರು ಸಂಕಷ್ಟ ಎದುರಿಸಿದ್ದಾರೆ.

ಮಡಿಕೇರಿ-ಮಂಗಳೂರು ರಸ್ತೆಯಿಂದ ತಾಳತ್‌ಮನೆಯಲ್ಲಿ ಭಾಗಮಂಡಲಕ್ಕೆ ತಿರುವು ತೆಗೆದುಕೊಳ್ಳುವ ಭಾಗದಲ್ಲಿಯೇ ಗುಂಡಿ ಬಿದ್ದ ರಸ್ತೆ ವಾಹನ ಸವಾರರನ್ನು ಸ್ವಾಗತಿಸುತ್ತದೆ. ನಂತರ ವಿರಾಜಪೇಟೆಗೆ ತಿರುವು ತೆಗೆದುಕೊಳ್ಳುವ ಸ್ಥಳದ ತನಕವೂ ಇದೇ ದುಸ್ಥಿತಿ ಇದೆ. ಇಲ್ಲಿಂದ ಮುಂದಕ್ಕೆ ಕೆಲವು ಮೀಟರ್ ಮಾತ್ರ ಹಳೆ ಡಾಂಬರಿನ ಕುರುಹು ಇರುವ ರಸ್ತೆ ಸಿಗುತ್ತದೆ. ಆದರೆ ಉಡೋತ್, ಅಪ್ಪಂಗಳ, ಹೆರವನಾಡು, ಬೆಟಗೇರಿ, ಬಕ್ಕ ತನಕವೂ ಗುಂಡಿಗಳ ಮಧ್ಯೆ ರಸ್ತೆ ಹುಡುಕಬೇಕಾದ ಸ್ಥಿತಿ ಇದೆ. ಕಾರುಗಂದ ತನಕ ಸ್ವಲ್ಪ ರ‍್ವಾಗಿಲ್ಲ ಅನ್ನಿಸಿದರೂ ಪುನಃ ಚೇರಂಬಾಣೆ, ಕೋಪಟ್ಟಿ, ಚೆಟ್ಟಿಮಾನಿಯಿಂದ ಭಾಗಮಂಡಲ ತನಕ ಸುಲಲಿತ ಪ್ರಯಾಣಕ್ಕೆ ಯೋಗ್ಯವಾದ ರಸ್ತೆಯೇ ಇಲ್ಲ.

ಈ ರಸ್ತೆ ದುಸ್ಥಿತಿಗೆ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಸಂಬAಧಿಸಿದವರ ಗಮನಕ್ಕೆ ತರಲಾಗಿದೆ. ಕೆಲವು ಕಡೆಗಳಲ್ಲಿ ಆಕ್ರೋಶಿತ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆಯನ್ನೂ ಮಾಡಿದ್ದಾರೆ. ಮತ್ತೆ ಕೆಲವು ಭಾಗಗಳಲ್ಲಿ ಗುಂಡಿಗಳಲ್ಲಿ ಬಾಳೆ ಗಿಡಗಳನ್ನೂ ನೆಟ್ಟು ವ್ಯವಸ್ಥೆಯ ವಿರುದ್ಧ ಸಿಟ್ಟು ತೋರಿಸಲಾಗಿದೆ. ಸಾಮಾನ್ಯವಾಗಿ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂದರ್ಭ ಈ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗುತ್ತಿತ್ತು. ಆದರೆ ಕಳೆದ ವರ್ಷದ ಜಾತ್ರೆ ವೇಳೆ ನೆಪ ಮಾತ್ರಕ್ಕೆ ಕೆಲವಡೆ ಈ ಕೆಲಸ ಮಾಡಲಾಗಿದೆ ಎನ್ನುವುದು ಸ್ಥಳೀಯರ ಆರೋಪ.

ಇಲ್ಲಿಯ ರಸ್ತೆ ದುರವಸ್ಥೆ ಮನಗಂಡ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ 4 ಕೋಟಿ ರೂ. ಸರ್ಕಾರದ ವಿಶೇಷ ಅನುದಾನ ತಂದು ಅಪ್ಪಂಗಳ ಜಂಕ್ಷನ್‌ನಿAದ ಬೆಟಗೇರಿ ತನಕದ ರಸ್ತೆ ಪುನರ್‌ನಿರ್ಮಾಣಕ್ಕೆ ಈ ವರ್ಷದ ಮೇ ತಿಂಗಳಿನಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ನಂತರ ಮಳೆ ಶುರುವಾದ ಕಾರಣ ಕಾಮಗಾರಿ ಆರಂಭ ಆಗಿರಲಿಲ್ಲ. ಕೆಲವೆಡೆ ಪುನರ್ ನಿರ್ಮಾಣ ಕೆಲಸಗಳಿಗಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದಲೂ ಸಮಸ್ಯೆ ಕಾಣಿಸಿಕೊಂಡಿದೆ. ಮಳೆ ಸತತವಾಗಿ ಈಗಲೂ ಮುಂದುವರಿದಿದ್ದು ಸದ್ಯಕ್ಕಂತೂ ಪುನರ್‌ನಿರ್ಮಾಣ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ರಸ್ತೆಯಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನಾದರೂ ಮುಚ್ಚಿದರೆ ಸಮಸ್ಯೆಗೆ ಸ್ವಲ್ಪ ಮಟ್ಟಿಗೆ ತಾತ್ಕಾಲಿಕ ಪರಿಹಾರವಾದರೂ ಸಿಗಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಈ ಸಂಬAಧ ಈಗಾಗಲೇ ಸಂಬAಧಿಸಿದ ಅಧಿಕಾರಿಗಳ ಗಮನ ಸೆಳೆದರೂ ಪ್ರತಿಕ್ರಿಯೆ ಸಿಗುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ.

ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಸಂಚರಿಸುವುದೆAದರೆ ಜ್ವರ ಬಂದ ಅನುಭವ ಆಗುತ್ತದೆ. ರಸ್ತೆ ಹಾಳಾಗಿ ಇಷ್ಟು ಸಮಯ ಆದರೂ ಇದನ್ನು ಸರಿಪಡಿಸಿಲ್ಲ. ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಪ್ರವಾಸಿಗರು, ಭಕ್ತರೂ ಸಂಚರಿಸುತ್ತಾರೆ. ಪರ ಊರಿನಿಂದ ಬರುವವರಿಗೆ ನಮ್ಮ ಈ ರಸ್ತೆ ದುಸ್ಥಿತಿ ನೋಡಿ ಜಿಲ್ಲೆ ಬಗ್ಗೆ ಯಾವ ಯಾವ ಅಭಿಪ್ರಾಯ ಬರಬಹುದು ಎನ್ನುವ ಕನಿಷ್ಠ ಪ್ರಜ್ಞೆಯೂ ಸಂಬAಧಿಸಿದವರಿಗೆ ಇದ್ದಂತಿಲ್ಲ. ಗುಂಡಿ ಮುಚ್ಚು ಕೆಲಸವನ್ನಾದರೂ ಮಾಡಿದರೆ ವಾಹನ ಸವಾರರು ಸ್ವಲ್ಪ ಸುಧಾರಿಸಿಕೊಳ್ಳಬಹುದು.

ಚರಣ್ ಕುಂಜಿಲನ, ವಕೀಲ, ಕಾರುಗುಂದ

ಮಡಿಕೇರಿ-ಭಾಗಮಂಡಲ ರಸ್ತೆ ತಾಳತ್‌ಮನೆಯಿಂದ ಬೆಟಗೇರಿ ಬಕ್ಕ ತನಕ ಸಂಪೂರ್ಣ ಹಾಳಾಗಿದೆ. ವಾಹನಗಳ ಓಡಾಟ ಅಸಾಧ್ಯ ಎನ್ನುವ ಸ್ಥಿತಿ ಇದೆ. ಕನಿಷ್ಠ ಗುಂಡಿ ಮುಚ್ಚಲು ಕೂಡ ಸಂಬAಧಿಸಿದ ಇಲಾಖೆಗೆ ಆಗುತ್ತಿಲ್ಲ ಎಂದರೆ ಏನು ಅರ್ಥ ಎಂದು ಗೊತ್ತಾಗುತ್ತಿಲ್ಲ. ಇದಿಗ ಮಳೆಯೂ ಮುಂದುವರಿದಿದ್ದು ಅಕ್ಟೋಬರ್‌ನಲ್ಲಿ ಕಾವೇರಿ ತುಲಾ ಸಂಕ್ರಮಣ ಜಾತ್ರೆಯೂ ಬರುತ್ತಿದೆ. ಇದು ಹೀಗೆ ಮುಂದುವರಿದರೆ ಪರಿಸ್ಥಿತಿ ಗಂಭೀರ ಆಗಬಹುದು.

ಶಬರೀಶ್ ಕುದುಕುಳಿ, ಭಾಗಮಂಡಲ

ಮಳೆಯ ಕಾರಣದಿಂದ ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಹಲವು ಬಾರಿ ಇಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗಿದೆ. ಆದರೆ ನಿರಂತರ ಮಳೆಯಿಂದ ಅವೆಲ್ಲಾ ಮತ್ತೆ ಹಾಳಾಗಿದೆ. ಮಳೆ ಕಡಿಮೆ ಆದರೆ ಇದೀಗ ಮತ್ತೊಮ್ಮೆ ಗುಂಡಿಗಳನ್ನು ಮುಚ್ಚಲಾಗುವುದು. ಮಳೆ ನಿಂತ ಕೂಡಲೇ ಅಪ್ಪಂಗಳ ಜಂಕ್ಷನ್‌ನಿAದ ಬೆಟಗೇರಿ ತನಕದ ರಸ್ತೆ ಪುನರ್‌ನಿರ್ಮಾಣ ಕಾಮಗಾರಿ ಶುರು ಮಾಡಲಾಗುವುದು. ಈ ಕೆಲಸ ಆದರೆ ಇಲ್ಲಿಯ ಸಮಸ್ಯೆ ಬಹುತೇಕ ಪರಿಹಾರವಾಗಲಿದೆ.

ಕೆ. ಇಬ್ರಾಹಿಂ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net