ಅನ್ಯ ಭಾಷೆ ಮೇಲಿನ ಪ್ರೀತಿ ಕಡಿಮೆ ಮಾಡಿ ; ಮಾತೃಭಾಷೆ ಕನ್ನಡದ ಏಳಿಗೆಗೆ ಶ್ರಮಿಸಿ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

Published on

ತುಮಕೂರು : ಭಾಷೆಯನ್ನು ಬೆಳೆಸುವ ಜವಾಬ್ದಾರಿ ಜನರ ಮೇಲಿದೆ, ಅನ್ಯ ಭಾಷೆ ಮೇಲಿನ ಪ್ರೀತಿ ಕಡಿಮೆ ಮಾಡಿಕೊಂಡು ಕನ್ನಡವನ್ನು ಹೆಚ್ಚು ಬೆಳೆಸುವ ಮೂಲಕ ಮಾತೃಭಾಷೆಯನ್ನು ಮತ್ತಷ್ಟು ಬೆಳೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು.

ಭಾಷೆ ಒಂದು ಮಾಧ್ಯಮವಷ್ಟೇ. ಅದು ವಿಜ್ಞಾನ ಅಥವಾ ಜ್ಞಾನವಲ್ಲ, ಇಂಗ್ಲಿಷ್ ವ್ಯಾಮೋಹವನ್ನು ಬಿಟ್ಟು, ನಮ್ಮ ಕನ್ನಡ ಭಾಷೆಯ ಮೇಲೆ ಕೀಳಿರಿಮೆ ಬಿಟ್ಟು ಬೆಳೆಸಬೇಕು, ಕರ್ನಾಟಕ ಏಕೀಕರಣಕ್ಕೆ ಕಾರಣೀಭೂತರಾಗಿರುವ ನಾಯಕರನ್ನು ಸ್ಮರಿಸಬೇಕು ಎಂದರು.

ಮನುಷ್ಯನಿಗೆ ನೆಲ, ಜಲ ಹಾಗೂ ಭಾಷೆಯ ಬಗ್ಗೆ ಅಭಿಮಾನ ಇರಬೇಕು, ನಾವು ಎಲ್ಲೆ ಇದ್ದರೂ ಕನ್ನಡದ ಮೇಲೆ ಅಭಿಮಾನ ಹೊಂದಿರಬೇಕು, ಸಂಗೀತದಲ್ಲಿಯೂ ನಮ್ಮ ಕೊಡುಗೆಯಿದೆ, ಶೈಕ್ಷಣಿಕವಾಗಿಯೂ ಕನ್ನಡ ಮುಂಚೂಣಿಯಲ್ಲಿದ್ದು ಗುಣಮಟ್ಟದ ಶಿಕ್ಷಣಕ್ಕೆ ಒತ್ತುನೀಡಲಾಗಿದೆ, ಈ ನೆಲ ಕಲೆ, ಸಾಹಿತ್ಯ, ಸಂಗೀತದ ನೆಲೆವೀಡು, ಈ ಫಲವತ್ತಾದ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಹೋರಾಟಕ್ಕೆ ಸಿದ್ದರಾಗಿರಬೇಕು ಎಂದರು.

ವಸಂತನರಸಾಪುರದಲ್ಲಿ 800ಕೋಟಿ ರೂ. ಬಂಡವಾಳ ನಿರೀಕ್ಷಿಸಲಾಗಿದೆ, ಕೊರಟಗೆರೆ, ಮಧುಗಿರಿ ತಾಲೂಕಿನಲ್ಲಿ ಕೈಗಾರಿಕೆ ಪ್ರದೇಶ ವಿಸ್ತರಿಸಲಾಗುತ್ತಿದೆ ಹಾಗೂ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಲ್ಲಿ ತುಮಕೂರಿನ ತೆಂಗಿಗೆ ಬೇಡಿಕೆ ಹೆಚ್ಚಾಗಿದ್ದು ಸ್ಥಳೀಯವಾಗಿಯೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಒಂದೆರಡು ವರ್ಷದಲ್ಲಿ ಜಿಲ್ಲೆಯ ಒಂದು ಭಾಗ ಸಂಪೂರ್ಣ ನೀರಾವರಿ ಯೋಜನೆಗೆ ಒಳಪಡಲಿದೆ, ನಮ್ಮ ಸರ್ಕಾರ ತುಮಕೂರು ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದು, ಜಯದೇವ ಹೃದ್ರೋಗ ಆಸ್ಪತ್ರೆ ಆರಂಭಿಸಲು ಚಿಂತನೆ ನಡೆಸಿದ್ದೇವೆ, ಎಲ್ಲಾ ತಾಲೂಕು ಆಸ್ಪತ್ರೆಗಳು ಆಸ್ಪತ್ರೆಗಳನ್ನು ಮೇಲ್ದರ್ಗೆರಿಸಲಾಗಿದ್ದು ಗ್ರಾಮೀಣ ಭಾಗದಲ್ಲಿಯೇ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದರು.

ಜಿಲ್ಲೆ ನಾಟಕ, ಸಂಗೀತಕ್ಕೆ ಹೆಸರಾಗಿದ್ದು ಕಲಾಮಂದಿರ, ಭವನ ನಿರ್ಮಾಣವಾಗಿದೆ, ಡಾ.ಗುಬ್ಬಿವೀರಣ್ಣ, ಮಾಸ್ಟರ್ ಹಿರಿಯಣ್ಣಯ್ಯ ರಂಗ ಕಲೆಗೆ ದೊಡ್ಡ ಕಾಣಿಕೆ ಮಾಡಿದ್ದಾರೆ, ನರಸಿಂಹರಾಜು, ಮಂಜುಳ, ಶಕ್ತಿಪ್ರಸಾದ್ ಚಲನಚಿತ್ರ ರಂಗದಲ್ಲಿ ಕಾಣಿಕೆ ನೀಡಿದ್ದಾರೆ. ಡಾ.ಶಿವಕುಮಾರಸ್ವಾಮೀಜಿ ಅವರು ಕನ್ನಡದ ಬೆಳೆವಣಿಗೆಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಮತ್ತಿತರರು ಇದ್ದರು.

ಪುನೀತ್, ಸಂಚಾರಿ ವಿಜಯ್ ನೆನೆದ ಮಾಧುಸ್ವಾಮಿ : ಸಚಿವ ಮಾಧುಸ್ವಾಮಿ ತಮ್ಮ ಭಾಷಣದಲ್ಲಿ ಇತ್ತೀಚೆಗೆ ನಿಧನರಾದ ಯುವ ನಟ ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಅವರನ್ನು ನೆನಪು ಮಾಡಿಕೊಂಡು ಭಾವುಕರಾದರು. ಪ್ರತಿಭಾವಂತರಾಗಿದ್ದ ಇಬ್ಬರೂ ನಟರು ಯುವಕರಾಗಿದ್ದು ಸಾಧನೆ ಮಾಡುತ್ತಿದ್ದರು. ಅವರು ಈ ಸಂದರ್ಭದಲ್ಲಿ ನಮ್ಮ ಜತೆ ಇರದಿರುವುದು ನಾಡಿಗಾದ ದೊಡ್ಡ ನಷ್ಟ ಎಂದರು.

ತುಮಕೂರು ಜಿಲ್ಲೆಯಲ್ಲಿಯೂ ಸ್ವಚ್ಛವಾದ ಕನ್ನಡ ಬಳಸುವ ಪಟ್ಟಿಯಲ್ಲಿರುವ ಜಿಲ್ಲೆಯಾಗಿದೆ, ಕನ್ನಡ ರಾಜ್ಯೋತ್ಸವ ನಮ್ಮ ಹೃದಯದ ಭಾವನೆ, ಎಲ್ಲರೂ ಸಂಭ್ರಮಿಸೋಣ, ಹೆಚ್ಚು ಕನ್ನಡ ಬಳಕೆಯ ಮೂಲಕ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸೋಣ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net