

ಬೆಳಗಾವಿ: ನಮ್ಮ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದು ತಮ್ಮ ಪುತ್ರನ ಅಧಿಕಾರ ಉಳಿಸಿಕೊಳ್ಳುವುದಕ್ಕೂ ಅಥವಾ ಪಕ್ಷ ಸಂಘಟನೆಗೂ ಎಂಬುವುದನ್ನು ಸ್ಪಷ್ಟಪಡಿಸಬೇಕು. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಜಿಲ್ಲೆಯ ಕಾಂಗ್ರೆಸ್ ಶಾಸಕರು ತಲಾ 25 ಲಕ್ಷ ರೂ. ನೀಡಿದ್ದಾರೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ನೀಡಿದ್ದಾರೆ ಎಂಬುವುದನ್ನು ಬಹಿರಂಗಪಡಿಸಲಿ. ಅಲ್ಲದೆ, ಭವನದ ನಿರ್ಮಾಣದ ಹಣ ದುರ್ಬಳಕೆ ಮಾಡಿಕೊಂಡವರ ಯಾರು? ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಪ್ರಶ್ನಿಸಿದರು.
ನಾನು ಕಾಂಗ್ರೆಸ್‌ನಿಂದ ಶಾಸಕನಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು 25 ಲಕ್ಷ ರೂ. ನೀಡಿದ್ದೆ. ಸಚಿವನಾದ ಬಳಿಕ 1 ಕೋಟಿ ರೂ. ಹಣ ನೀಡಿದ್ದೇನೆ. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದು ಯಾರಿಗೂ ಮಾಹಿತಿ ಇಲ್ಲ. ಕಾಂಗ್ರೆಸ್ ಭವನ ನಿರ್ಮಾಣ ಮಾಡುವುದರಲ್ಲಿ ಸಾಕಷ್ಟು ಗೋಲ್ಮಾಲ್ ಆಗಿದೆ. ಈ ಕುರಿತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಗೆ ಎಲ್ಲವೂ ಗೊತ್ತಿದೆ. ಅವನನ್ನು ವಿಚಾರಿಸಿದರೆ ಬೆಳಕಿಗೆ ಬರಲಿದೆ ಎಂದರು.