ಬಿಜೆಪಿ ಸರ್ಕಾರದಲ್ಲಿ ನೆಮ್ಮದಿಯಿಲ್ಲ ; ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಆರೋಪ

30 Sira-01
Published on

ಶಿರಾ : ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕರು, ರೈತರು, ಸಾಮಾನ್ಯ ಜನರು ನೆಮ್ಮದಿಯಾಗಿಲ್ಲ. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ, ಪರಿಶಿಷ್ಟರ ಕಲ್ಯಾಣ ಆಗಬೇಕಿದ್ದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರತಿ ಸೀಟು ಕಾಂಗ್ರೆಸ್ ಗೆಲ್ಲಬೇಕು, ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಸ್ಪಷ್ಟ ಸಂದೇಶ ನೀಡುವಂತೆ ಇರಬೇಕು ಎಂದು ಕೋರಿದರು.

ಶಿವಾಜಿ ನಗರದ ಶಾಸಕ ರಿಜ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಬಗ್ಗೆ ಕಿಡಿಕಾರಿ, ಜಿಲ್ಲೆಯಲ್ಲಿ ಯಾವುದೇ ಅಭ್ಯರ್ಥಿ ಇರಲಿಲ್ಲವೇ? ಬೆಂಗಳೂರಿನಿಂದ ಇಂಪೋರ್ಟ್ ಮಾಡಿಕೊಂಡಿದ್ದೀರಿ. ಇದರ ಅರ್ಥ ಬಿಜೆಪಿ ಕಂಗಾಲಾಗಿದೆ ಎಂದರು.

ಶಾಸಕ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ಬೆಲೆ ಏರಿಕೆ, ಶೋಷಣೆ, ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 13 ಲಕ್ಷ ಮನೆಗಳನ್ನು ನೀಡಿದ್ದೆವು. ಬಿಜೆಪಿ ಸರ್ಕಾರದಲ್ಲಿ ಹೊಸ ಮನೆಗಳಿರಲಿ, ನಮ್ಮ ಕಾಲದ ಮನೆಗಳ ಬಿಲ್ ನೀಡಿದರೆ ಸಾಕು ಎನ್ನುವಂತಾಗಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಷಫಿ ಅಹ್ಮದ್, ಷಡಕ್ಷರಿ, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಹನುಮಂತಪ್ಪ, ಕೆಂಚಮಾರಯ್ಯ, ಕೋಡಿಹಳ್ಳಿ ಚಂದ್ರಶೇಖರ್, ಕಲ್ಕೆರೆ ರವಿಕುಮಾರ್, ಸಂತೋಷ್ ಜಯಚಂದ್ರ, ಅಮಾನುಲ್ಲಾ ಖಾನ್, ಅಬ್ದುಲ್ಲಾ ಖಾನ್, ಅಜಯ ಕುಮಾರ್, ಗುಳಿಗೇನಹಳ್ಳಿ ಆರ್.ನಾಗರಾಜು, ಶೇಷಾನಾಯ್ಕ, ಹಾರೋಗೆರೆ ಮಹೇಶ್, ರೂಪೇಶ್ ಕೃಷ್ಣಯ್ಯ, ಭೂವನಹಳ್ಳಿ ಸತ್ಯನಾರಾಯಣ, ಶೇಷಾನಾಯ್ಕ, ಪಿ.ಆರ್.ಮಂಜುನಾಥ್, ಜಿ.ಎಸ್.ರವಿ, ಶಶಿಧರಗೌಡ, ಜಿ.ಎನ್.ಮೂರ್ತಿ, ಬರಗೂರು ನಟರಾಜು, ಮಹಿಳಾ ಘಟಕದ ಶೋಭಾ, ಮಂಜುಳಾಬಾಯಿ ಇದ್ದರು.

ಪ್ರಧಾನಿ ರಾಜೀನಾಮೆ ನೀಡಲಿ : ಯಾವುದೇ ಬಿಲ್ ವಿಧಾನಸಭೆ ಅಥವಾ ಪಾರ್ಲಿಮೆಂಟ್‌ನಲ್ಲಿ ಬಿದ್ದುಹೋದರೆ, ಸರ್ಕಾರದ ಮುಖ್ಯಸ್ಥರು ರಾಜೀನಾಮೆ ನೀಡುವುದು ವಾಡಿಕೆ. ಕೃಷಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಅಸುನೀಗಿದ್ದಾರೆ. ಈಗ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯುತ್ತೇವೆ ಎನ್ನುತ್ತಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದರು.

ಅನ್ಯ ಪಕ್ಷಗಳು ಹಣವಂತರನ್ನು ಕರೆತಂದು ಅಭ್ಯರ್ಥಿಗಳನ್ನಾಗಿ ಮಾಡುವ ಮೂಲಕ ಮೂಲ ಕಾರ್ಯಕರ್ತರನ್ನು ಕಡೆಗಣಿಸಿವೆ. ಹಣ ಇರುವವರು ಬಡವರ ಸೇವೆ ಮಾಡುತ್ತಾರೆಯೇ?. ಕೆ.ಎನ್.ರಾಜಣ್ಣ ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net