

ಸ್ವಾಮಿ ಪರಹಿತಾನಂದ ಜೀ ಮಹರಾಜ್ ಸಾನ್ನಿಧ್ಯ * ಶಾಸಕ ಎ.ಎಸ್. ಪೊನ್ನಣ್ಣ ಉಪಸ್ಥಿತಿ
ಗೋಣಿಕೊಪ್ಪಲು : ಯೋಗವು ಜೀವನದ ಪಾಠ ಕಲಿಸಿಕೊಡಲಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜನೆ ಗೊಂಡಿದ್ದ ವಿಶ್ವಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಸದೃಢ ಆರೋಗ್ಯಕ್ಕೆ ವಿವಿಧ ಆಸನಗಳ ಅಭ್ಯಾಸ ಸಹಕಾರಿಯಾಗಿವೆ. ಯೋಗಾಭ್ಯಾಸದಿಂದ ಏಕಾಗ್ರತೆ ವೃದ್ಧಿಯಾಗುವುದರೊಂದಿಗೆ ಮಕ್ಕಳ ಜ್ಞಾನ, ಕ್ರಿಯಾಶೀಲತೆ ವೃದ್ಧಿಯಾಗಲಿದೆ ಎಂದರು. ಭಾರತದ ಪುರಾತನ ಪದ್ಧತಿಗಳಲ್ಲಿ ಯೋಗವೂ ವಿಶೇಷ ಸ್ಥಾನ ಪಡೆದಿದೆ. ಯೋಗ ಎಂಬುದು ಕೇವಲ ಒಂದು ದಿನ ಅಥವಾ ದಿನಾಚರಣೆಗೆ ಸಂಭ್ರಮಕ್ಕೆ ಮಾತ್ರ ಸೀಮಿತವಾಗಬಾರದು. ದಿನನಿತ್ಯದ ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಾತ್ಮ ಸಾಧನೆಗೆ ಪ್ರೇರಕ: ಸಾನ್ನಿಧ್ಯ ವಹಿಸಿದ್ದ ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷ ಪರಹಿತಾನಂದಜೀ ಮಹರಾಜ್ ಸಂದೇಶ ನೀಡಿ, ಯೋಗವು ಕೇವಲ ಆಂಗಿಕ ಪ್ರಕ್ರಿಯೆ ಅಲ್ಲ. ಇದು ಅಧ್ಯಾತ್ಮ ಸಾಧನೆಗೆ ಪ್ರೇರಕವಾಗಿದೆ ಎಂದರು. ಸ್ವಾಮಿ ವಿವೇಕಾನಂದರು ‘ ಯೋಗವು ಜೀವನದ ಅವಿಭಾಜ್ಯ ಅಂಗ’ ಎಂದು ಲೋಕಕ್ಕೆ ಅರಿವು ಮೂಡಿಸಿದ್ದಾರೆ. ಪ್ರತಿಯೊಬ್ಬರ ಒಳಗಿನ ಆಧ್ಯತ್ಮಿಕ ಶಕ್ತಿಯನ್ನು ಯೋಗವು ಪ್ರಕಾಶಗೊಳಿಸಲಿದೆ ಎಂದರು. ಎಲ್ಲ ವಯೋಮಾನ ದವರಿಗೂ ಯೋಗಾಭ್ಯಾಸದಲ್ಲಿ ಆಸನಗಳು ಇವೆ.ನಿರಂತರ ಅಭ್ಯಾಸದ ಮೂಲಕ ಅವುಗಳನ್ನು ಕರಗತ ಮಾಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು, ಆಶ್ರಮದ ಪ್ರಮುಖರು ಹಾಜರಿದ್ದರು.
ಯೋಗ ಎಂಬುದು ವ್ಯಕ್ತಿಯೊಬ್ಬನ ದೈಹಿಕ, ಮಾನಸಿಕ ವಿಕಸನಕ್ಕೆ ಮಾತ್ರವಲ್ಲ, ಆತನಲ್ಲಿರುವ ವಿಶ್ವ ಶಕ್ತಿಯನ್ನು ಹೊರಗೆ ತರಲು ಪ್ರೇರಕವಾಗಿದೆ. ಆ ಮೂಲಕ ಧರ್ಮಸಾಧನೆ, ಅಂತರಂಗ ದರ್ಶನ ಮತ್ತು ಭಗವಂತನ ದರ್ಶನ ಮಾಡಿಸಲೂ ಪೂರಕವಾಗಿದೆ.
> ಸ್ವಾಮಿ ಪರಹಿತಾನಂದ ಜೀ ಮಹರಾಜ್
ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷ, ಪೊನ್ನಂಪೇಟೆ