ರಿಯಾಝ್​ ಕಡಂಬು ಬಂಧನ, ಬಿಡುಗಡೆ

Kadambu
Published on

ಜಾಮೀನು ಷರತ್ತು ಉಲ್ಲಂಘನೆ ಆರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಷರತ್ತು ಪಾಲಿಸದ ಹಿನ್ನೆಲೆಯಲ್ಲಿ ಎಸ್​ಡಿಪಿಐ ರಾಜ್ಯ ಮುಖಂಡ ರಿಯಾಝ್​ ಕಡಂಬು ಅವರನ್ನು ಪೊಲೀಸರು ಬಂಧಿಸಿದ್ದು, ಗುರುವಾರ ಸಂಜೆಗೆ ಹಿರಿಯಡ್ಕ ಜೈಲಿಗೆ ರವಾನಿಸಿದ್ದಾರೆ.

ಉಡುಪಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ರಿಯಾಝ್​ ಕಡಂಬು ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಹೈಕೋರ್ಟ್​ನಿಂದ ಜಾಮೀನು ಪಡೆದಿದ್ದು, 15 ದಿನಗಳಲ್ಲಿ ಉಡುಪಿ ನಗರ ಪೊಲೀಸ್​ ಠಾಣೆಗೆ ಹಾಜರಾಗಬೇಕೆಂದು ಕೋರ್ಟ್​ ಷರತ್ತು ವಿಧಿಸಿತ್ತು. ಆದರೆ, 15 ದಿನ ಕಳೆದರೂ ರಿಯಾಝ್​ ಕಡಂಬು ಠಾಣೆಗೆ ಹಾಜರಾಗದೆ ಷರತ್ತು ಉಲ್ಲಂಘಿಸಿದ್ದರು.

ಉಡುಪಿ ನಗರ ಠಾಣೆ ಪೊಲೀಸರು ರಿಯಾಝ್​ ಅವರನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಮತ್ತೆ ಷರತ್ತುಬದ್ಧ ಜಾಮೀನು

ನ್ಯಾಯಾಲಯದ ಷರತ್ತು ಉಲ್ಲಂಘನೆ ಹಿನ್ನೆಲೆಯಲ್ಲಿಯೇ ಹಿರಿಯಡ್ಕದ ಜೈಲಿನಲ್ಲಿದ್ದ ರಿಯಾಝ್​ ಕಡಂಬುವಿಗೆ ಮತ್ತೆ ಷರತ್ತುಬದ್ಧ ಜಾಮೀನು ಲಭಿಸಿದೆ. ತನ್ನ ಬಂಧನ ಖಂಡಿಸಿ ವಕೀಲರ ಮೂಲಕ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಜಾಮೀನು ಲಭಿಸಿದೆ. ಜೈಲಿನಿಂದ ಹೊರಬಂದ ಬಳಿಕ ಯಾವುದೇ ದ್ವೇಷ ಪೂರಕ ಭಾಷಣ ಮಾಡುವಂತಿಲ್ಲ. ಪೊಲೀಸರ ತನಿಖೆಗೆ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ನೀಡಿರುವ ಜಾಮೀನು ರದ್ದು ಮಾಡಲಾಗುವುದೆಂದು ಕೋರ್ಟ್​ ತಿಳಿಸಿದೆ ಎಂದು ಎಸ್ಪಿ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net