

ದೊಡ್ಡಬಳ್ಳಾಪುರ: ದೊಡ್ಡ ಬಜಾರ್‌ಗಳ ರಿಯಾಯಿತಿ ಆಮಿಷದಿಂದಾಗಿ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದು, ಮಾಲ್‌ಗಳ ರಿಯಾಯಿತಿ ವ್ಯಾಪಾರದ ವಿರುದ್ಧ ಹಾಗೂ ಒಂದು ದೇಶ ಒಂದು ಬೆಲೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ತಾಲೂಕು ದಿನಸಿ ವರ್ತಕರ ಸಂಘ ಹಾಗೂ ತಾಲೂಕು ವಿತರಕರ ಸಂಘದ ನೇತೃತ್ವದಲ್ಲಿ ನೂರಾರು ವರ್ತಕರು ಪ್ರತಿಭಟನೆ ನಡೆಸಿದರು.
ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ ವರ್ತಕರು, ನಗರದ ನೆಲದಾಂಜನೇಯಸ್ವಾಮಿ ದೇವಾಲಯ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಉಪತಹಸೀಲ್ದಾರ್ ಆರ್.ಸುರೇಶ್‌ಗೆ ಮನವಿ ಸಲ್ಲಿಸಿದರು.
ದಿನಸಿ ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್.ಸೋಮರುದ್ರ ಶರ್ಮ ಮಾತನಾಡಿ, ನಗರ ಪ್ರದೇಶಗಳಲ್ಲಿದ್ದ ಮಾಲ್‌ಗಳು ಇಂದು ತಾಲೂಕುಮಟ್ಟಕ್ಕೂ ವ್ಯಾಪಿಸಿದ್ದು, ವ್ಯಾಪಾರ ಹದಗೆಡಿಸುತ್ತಿವೆ. ರಿಯಾಯಿತಿ ಎನ್ನುವ ಹೆಸರಿನಲ್ಲಿ ಗ್ರಾಹಕರಿಗೆ ವಿವಿಧ ಆಮಿಷ ಒಡ್ಡಿ ಗುಣಮಟ್ಟ ಕಡೆಗಣಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ದುಬಾರಿ ಬಾಡಿಗೆ, ಜೀವನ ವೆಚ್ಚಗಳಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ರಿಯಾಯಿತಿ ಎಂಬ ಹೆಸರಿನಲ್ಲಿ ದೊಡ್ಡ ಮಾಲ್‌ಗಳ ಸೆಳೆತ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಎಂ.ಸಿ.ರಘುನಾಥ್ ಮಾತನಾಡಿ, ಒಂದು ದೇಶ ಒಂದು ಬೆಲೆ ನೀತಿ ಅಳವಡಿಕೆ, ರಿಯಾಯಿತಿ ಮೋಸದ ಜಾಲ ನಿಯಂತ್ರಣಕ್ಕೆ ಕ್ರಮ, ವ್ಯಾಪಾರಸ್ಥರ ಹಿತ ಕಾಪಾಡಲು ಸರ್ಕಾರ ನಿಗಮ ಮಂಡಳಿ ಅಸ್ತಿತ್ವ ತರಬೇಕು, ವ್ಯಾಪಾರಿಗಳ ಪ್ರತಿನಿಧಿಗಳಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಬೇಕು ಎಂದರು.
ದಿನಸಿ ವರ್ತಕರ ಸಂಘದ ಖಜಾಂಚಿ ಡಿ.ಎನ್.ರಾಮಯ್ಯ ಶೆಟ್ಟಿ, ಮಾಜಿ ಅಧ್ಯಕ್ಷ ಆರ್.ವಿ.ಶಿವಣ್ಣ, ವಿತರಕರ ಸಂಘದ ಅಧ್ಯಕ್ಷ ಕೆ.ಎನ್.ಪ್ರಭಾಕರ್, ಕಾರ್ಯದರ್ಶಿ ಪ್ರಕಾಶ್ ಮತ್ತಿತರರಿದ್ದರು.
ಪ್ರತಿಭಟನೆಗೆ ಮೊಬೈಲ್ ಹಾಗೂ ಕರೆನ್ಸಿ ವ್ಯಾಪಾರಸ್ಥರ ಸಂಘ, ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಫ್ಯಾನ್ಸಿ ಸ್ಟೋರ್ಸ್ ಸೇರಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಪ್ರತಿಭಟನೆಯ ನಂತರ ವರ್ತಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ವರ್ತಕರ ಹಾಗೂ ವಿತರಕರ ಒಕ್ಕೂಟದಿಂದ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಬಸ್‌ಗಳಲ್ಲಿ ತೆರಳಿದರು.