

ಪಾಂಡವಪುರ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ನದಿ ಅಂಚಿನ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹ ಪರಿಸ್ಥಿತಿ ಎದುರಾದರೆ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮ ಸಂಕಷ್ಟಕ್ಕೆ ಒಳಗಾಗುವ ಗ್ರಾಮವಾಗಿದ್ದು, ಅಣೆಕಟ್ಟೆಯಿಂದ ಹೆಚ್ಚಿನ ನೀರು ನದಿಗೆ ಹರಿದರೆ ಗ್ರಾಮಕ್ಕೆ ಮತ್ತು ರೈತರ ಜಮೀನಿಗೆ ನೀರು ನುಗ್ಗಿ ಹೆಚ್ಚಿನ ನಷ್ಟ ಸಂಭವಿಸುತ್ತದೆ. ಹೀಗಾಗಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ನದಿಯಿಂದ ಯಾವ ಭಾಗದಿಂದ ನೀರು ನುಗ್ಗುತ್ತದೆ ಎಂಬುದರ ಮಾಹಿತಿ ಪಡೆದುಕೊಂಡರು. ಜತೆಗೆ ಯಾವುದೇ ಸಂದರ್ಭದಲ್ಲಾದರೂ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಹೀಗಾಗಿ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮೇವಿಗಾಗಿ ದನ ಕರುಗಳನ್ನು ನದಿ ಅಂಚಿಗೆ ಬಿಡಬಾರದು. ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ತುರ್ತು ಸಂದರ್ಭ ಎದುರಾದರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ರಘು, ಮಂಜು, ರಾಘವೇಂದ್ರ ಇತರರು ಇದ್ದರು.