

ಅಥಣಿ ಗ್ರಾಮೀಣ: ನೆರೆ ಹಾವಳಿ ಕಡಿಮೆಯಾಗುತ್ತಿದ್ದು, ನದಿ ತೀರದ ಜನರು ಭಯಪಡುವ ಅಗತ್ಯವಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಬಳಿ ಕೃಷ್ಣಾ ನದಿಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿ, ನೆರೆ ಸಂತ್ರಸ್ತರಿಗೆ ತೊಂದರೆಯಾಗದಂತೆ ತಾಲೂಕಾಡಳಿತ ಕ್ರಮ ಕೈಗೊಂಡಿದೆ. ಅಧಿಕಾರಿಗಳು ಹಾನಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಸುರೇಶ ಮಾಯಣ್ಣವರ ಮಾತನಾಡಿ, ಶಾಶ್ವತ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದರು. ನದಿಇಂಗಳಗಾಂವ ಗ್ರಾಮದಿಂದ ಸಪ್ತಸಾಗರ ಗ್ರಾಮದ ಸಂಪರ್ಕ ರಸ್ತೆ ಎತ್ತರ ಹೆಚ್ಚಿಸಬೇಕು. ಕೃಷ್ಣಾನದಿಯಲ್ಲಿ ಸಂಚರಿಸಲು ಹೊಸ ಬೋಟ್ ನೀಡಬೇಕು ಎಂದು ಗ್ರಾಮಸ್ಥರು ಶಾಸಕ ಲಕ್ಷ್ಮಣ ಸವದಿ ಅವರಿಗೆ ವಿನಂತಿಸಿದರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ, ಗುರುಬಸು ತೆವರಮನಿ, ಶಿವಪುತ್ರ ಗುಳಪ್ಪನವರ, ಶಿವಾನಂದ ದಾಂಬೂಲಿ, ಗ್ರಾಪಂ ಅಧ್ಯಕ್ಷೆ ಸಂಗೀತಾ ಚನ್ನಗೌಡರ, ಫರೀದ್ ನನ್ನೆ, ಸತೀಶ ಗುಂಡಕಲ್ಲಿ, ಅಣ್ಣಾಸಾಬ ಮದಬಾವಿ, ಮಲ್ಲಪ್ಪ ಠಕ್ಕಣವರ, ವಿಠ್ಠಲ ರಾಚಗೌಡರ ಇತರರಿದ್ದರು.