

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ಲೆಕ್ಕಪತ್ರಗಳ ದಾಖಲೆ ಮತ್ತು 2023-24ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆಯ ಜಮಾಬಂದಿ ಸಭೆ ಉಪ್ಪಿನಂಗಡಿ ಗ್ರಾಪಂನಲ್ಲಿ ನಡೆಯಿತು.
ಗ್ರಾಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಪಂ ಕಾರ್ಯದರ್ಶಿ ಗೀತಾ ಬಿ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಲೆಕ್ಕಪತ್ರಗಳ ದಾಖಲೆ ನೀಡಿದರು.
ಗ್ರಾಪಂ ಸದಸ್ಯ ಅಬ್ದುಲ್ ರಶೀದ್, ಜಮಾಬಂದಿ ಸಭೆಗೆ ಗ್ರಾಪಂ ಪಿಡಿಒ ಗೈರು ಹಾಜರಾದ ಬಗ್ಗೆ ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು. ಗ್ರಾಪಂನ ತ್ಯಾಜ್ಯ ವಿಲೇವಾರಿ ಘಟಕವಿದ್ದರೂ ನೆಡ್ಚಿಲ್ ಬಳಿಯ ಎಸ್ಸಿ ಕಾಲನಿ ಬಳಿ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಇದರಿಂದ ಪರಿಸರವಿಡೀ ದುರ್ವಾಸನೆ ಬೀರುತ್ತಿದೆ, ಕಾಡು ಹಂದಿ, ನಾಯಿಗಳು ಬಂದು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿ ಮಾಡಿ ಹಾಕಿವೆ. ಇದರಿಂದ ಈ ಪ್ರದೇಶವಿಡೀ ಕಲುಷಿತಗೊಂಡಿದೆ. ತ್ಯಾಜ್ಯ ಘಟಕದ ಬಳಿಯೇ ನೇತ್ರಾವತಿ ನದಿಗೆ ತ್ಯಾಜ್ಯಗಳು ಸೇರುತ್ತವೆ. ಕಲುಷಿತ ನೀರು ಕೂಡಾ ನದಿಗೆ ಹರಿಯುತ್ತಿದೆ. ಇದರಿಂದ ನಮ್ಮ ಜೀವನದಿಗಳು ಮಲೀನವಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದಕ್ಕುತ್ತರಿಸಿದ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳದ ಸಮಸ್ಯೆ ಇದೆ. ತ್ಯಾಜ್ಯ ವಿಲೇವಾರಿಗೆ ಜಾಗ ಹುಡುಕಿಕೊಡಲು ಕಂದಾಯ ಇಲಾಖಾಧಿಕಾರಿಗಳಿಗೆ ಹೇಳಿದ್ದೇವೆ. ನದಿಗೆ ಮಲೀನ ನೀರು ಹರಿಯುವುದನ್ನು ತಡೆಗಟ್ಟಲು ಬೃಹತ್ ಇಂಗುಗುಂಡಿ ನಿರ್ಮಿಸುವ ಯೋಜನೆ ಗ್ರಾಪಂ ಹಾಕಿಕೊಂಡಿದೆ ಎಂದರು.
ಜಮಾಬಂದಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಮಾತನಾಡಿ, ಜಮಾಬಂಧಿ ಸಭೆಯಲ್ಲಿ ಗ್ರಾಪಂನಲ್ಲಿ ನಡೆದ ಕಾಮಗಾರಿಗಳ ಲೆಕ್ಕ ಪರಿಶೀಲನೆ, ದಾಖಲೆ ಪರಿಶೀಲನೆ ಮಾಡಲು ಗ್ರಾಮಸ್ಥರಿಗೆ ಮುಕ್ತ ಅವಕಾಶವಿದೆ. ಇದನ್ನು ಗ್ರಾಮಸ್ಥರು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ತೆರಿಗೆ ವಸೂಲಾತಿಗೆ ಗ್ರಾಪಂ ವಿಶೇಷ ಅಭಿಯಾನ ರೂಪಿಸಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯರಾದ ಉಷಾ ನಾಯ್ಕ, ಉಷಾ ಮುಳಿಯ, ವನಿತಾ ಆರ್ತಿಲ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿ ಜ್ಯೋತಿ ಕಾಮಗಾರಿಗಳ ಪಟ್ಟಿ ಓದಿ ಸ್ವಾಗತಿಸಿ, ವಂದಿಸಿದರು.