

ಕೊಳ್ಳೇಗಾಲ: ಅಂತರ್ಜಲ ಮೂಲವಾಗಿರುವ ಕೊಳ್ಳೇಗಾಲ ತಾಲೂಕಿನ ಕೋಟೆಕೆರೆ ಅಭಿವೃದ್ಧಿಪಡಿಸಿ ನದಿ ಮೂಲದಿಂದ ನೀರು ತುಂಬಿಸಬೇಕು ಎನ್ನುವ ಒಂದೂವರೆ ದಶಕದ ರೈತರ ಬೇಡಿಕೆ ಇನ್ನೂ ಈಡೇರಿಲ್ಲ.
ತಾಯಿ ಕೆರೆಯಂತಲೆ ಕರೆಯಲ್ಪಡುವ ಕೋಟೆ ಕೆರೆ ಕೆಂಪನಪಾಳ್ಯ ಗ್ರಾಮದಲ್ಲಿದೆ. 122 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಇದಾಗಿದೆ. 250ಕ್ಕೂ ಹೆಚ್ಚು ಎಕರೆ ಪ್ರದೇಶದ ರೈತರ ಜಮೀನಿಗೆ ಕೋಟೆ ಕೆರೆಯೇ ಜೀವನಾಡಿಯಾಗಿದ್ದು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿದೆ.
ಕೋಟೆ ಕೆರೆ ಅಭಿವೃದ್ಧಿಪಡಿಸಬೇಕು, ಕಾವೇರಿ ನದಿ ಮೂಲದಿಂದ ಕೆರೆ ತುಂಬಿಸುವ ಕೆಲಸ ಮಾಡಬೇಕೆಂದು ಕೆಂಪನಪಾಳ್ಯ ಭಾಗದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು 2007ರ ಇಸವಿಯಿಂದಲೂ ಜನಪ್ರತಿನಿಧಿಗಳಿಗೆ ಹಾಗೂ ನೀರಾವರಿ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.
ನಿರ್ಲಕ್ಷ್ಯ ಧೋರಣೆಯಿಂದ ಕೋಟೆ ಕೆರೆ ಅಭಿವೃದ್ಧಿಗೆ ತೊಡಕಾಗಿದೆ. ಈ ಭಾಗದ ರೈತರ ಕೃಷಿಗೆ ಅಡ್ಡಿಯಾಗಿದೆ. ಕೆರೆಯಲ್ಲಿ ಹೂಳು, ಗಿಡಗಂಟಿಗಳು ಬೆಳೆದು ನಿಂತಿವೆ. ಹೂಳಿನಿಂದ ಭರ್ತಿಯಾದ ಕೆರೆ ಕಾಲ ಕ್ರಮೇಣ ಮೈದಾನದಂತಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಅನ್ನದಾತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂದೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನು ಮೋದನೆ ಸಿಗಲಿದೆ ಎಂಬ ಆಶಾಭಾವನೆ ರೈತರದ್ದಾಗಿದೆ.
ಕೋಟೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಕಾರ್ಯವಾದರೆ ಈ ಭಾಗದ ರೈತರಲ್ಲಿ ಮಂದಹಾಸ ಮೂಡಲಿದೆ. ಜಕ್ಕಳಿ, ಕೆಂಪಪಾಳ್ಯ, ರಕ್ಕಸನಪಾಳ್ಯ, ತಿಮ್ಮರಾಜೀಪುರ, ಹೊಂಡರಬಾಳು, ಸಿದ್ದಯ್ಯನಪುರ, ಕೊಳ್ಳೇಗಾಲ ಮೋಳೆ ಇತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಕೊಳವೆ ಬಾಯಿ, ಬಾವಿ ಹಾಗೂ ಇತರ ಕೆರೆಗಳ ಅಂತರ್ಜಲ ಹೆಚ್ಚಾಗಲು ಸಹಕಾರಿಯಾಗಲಿದೆ.
ಹಲವು ಕೆರೆಗಳಿಗೆ ಕೋಟೆ ಕೆರೆ ಸಂಪರ್ಕವಿದೆ. ಕೋಟೆ ಕೆರೆಯಿಂದ ಹೊಂಡರಬಾಳು ಕೆರೆ, ಚಿಕ್ಕರಂಗನಾಥ ಕೆರೆ, ಕೊಂಗಳ ಕೆರೆ, ಪಾಪನ ಕೆರೆ ಸೇರಿದಂತೆ ಇತರ ಅನ್ನದಾತರ ನೀರಿನ ಮೂಲಗಳಾದ ಕೆರೆಗಳಿಗೆ ನೀರು ಸರಾಗವಾಗಿ ಹರಿಯಲಿದೆ. ಹಾಗಾಗಿ ಕೋಟೆ ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಬೇಕೆಂಬ ರೈತರ ದೀರ್ಘ ಕಾಲದ ಬೇಡಿಕೆಯಾಗಿದೆ.
ಕೋಟೆ ಕೆರೆಗೆ ನೀರು ತುಂಬಿಸಲು ಹಿಂದಿನ ಶಾಸಕರಿಗೆ ರೈತರು ಮನವಿ ಮಾಡಿದ್ದರು. ಈ ವೇಳೆ ಹಳೇ ಹಂಪಾಪುರ ಕಾವೇರಿ ನದಿ ಮೂಲದಿಂದ ಬಾಪುನಗರ, ಶಾಂತಿಹಳ್ಳ ಮಾರ್ಗವಾಗಿ ಕೋಟೆಗೆ ನೀರು ತುಂಬಿಸಲು ಹಿಂದೆ ಆಲೋಚಿಸಲಾಗಿತ್ತು. ನಂತರ, ಈ ಯೋಜನೆ ಮುಂದುವರಿಯದೆ ಸ್ಥಗಿತಗೊಂಡಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ನೀರಾವರಿಗೆ ಹೆಚ್ಚು ಆದ್ಯತೆ ಸಿಗಲಿದೆ ಎಂಬ ಅಶಯದಂತೆ ಕೋಟೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಕೊಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಕೋಟೆ ಕೆರೆಗೆ ನದಿ ಮೂಲದಿಂದ ನೀರು ತುಂಬಿಸಬೇಕೆಂದು ಒಂದೂವರೆ ದಶಕಗಳಿಂದಲೂ ಮನವಿ ಮಾಡಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹಿಂದಿನ ಶಾಸಕರು ಈ ಯೋಜನೆಗೆ ಡಿಪಿಆರ್ ಮಾಡಲಾಗಿದೆ ಎಂಬ ಭರವಸೆ ನೀಡಿದ್ದರು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಸಿಗಲಿದೆ ಎಂಬ ಆಶಾಭಾವನೆಯಿದೆ. ಆದ್ದರಿಂದ ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿ ಕೃಷಿಗೆ ಅನುಕೂಲವಾಗಲಿದೆ. ಶೈಲೇಂದ್ರ ಜಿಲ್ಲಾ ಕಾರ್ಯಾಧ್ಯಕ್ಷ, ರೈತ ಸಂಘ 210 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆಯಡಿ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಕೋಟೆಕೆರೆ, ಕೃಷ್ಣಯ್ಯನ ಕಟ್ಟೆ, ಆಮೆ ಕೆರೆ ಸೇರಿದಂತೆ 13 ಕೆರೆಗಳಿವೆ. ಮುಳ್ಳೂರು ಸಮೀಪದ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಇದಾಗಿದೆ. ಕ್ಯಾಬಿನೆಟ್ ಅನುಮೋದನೆ ಸಿಗುವುದೆ ಎಂಬುದನ್ನು ಕಾದು ನೋಡಬೇಕಿದೆ. ಕೋಟೆಕೆರೆ, ಕೃಷ್ಣಯ್ಯನ ಕಟ್ಟೆ, ಮುಳ್ಳೂರು ಕೆರೆ ಅಭಿವೃದ್ಧಿಗೆ ಶಾಸಕರ ಬಳಿ ಅನುದಾನಕ್ಕೆ ಮನವಿ ಮಾಡಲಾಗಿದೆ. ಅಭಿಲಾಷ್ ಎಇಇ, ಸಣ್ಣ ನೀರಾವರಿ ಇಲಾಖೆ, ಚಾಮರಾಜನಗರ