ಕಳೆಗುಂದಿದೆ ರಿವರ್ ವಿವ್ಯೂ ಪಾರ್ಕ್

river new
Published on

ಹರೀಶ್ ಮೋಟುಕಾನ, ಮಂಗಳೂರು

ನಗರದ ಬೋಳಾರದಲ್ಲಿ ನೇತ್ರಾವತಿ ನದಿಯ ಹಿನ್ನೀರು ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಪಾರ್ಕ್ ಸಮರ್ಪಕ ನಿರ್ವಹಣೆ ಇಲ್ಲದೆ ಕಳೆಗುಂದಿದೆ.

ಮಂಗಳೂರು ಮಹಾನಗರ ಪಾಲಿಕೆ ನಿರ್ಮಾಣ ಮಾಡಿದ ಈ ಪಾರ್ಕನ್ನು 2017ರ ಫೆ.27ರಂದು ಅಂದಿನ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟನೆ ಮಾಡಿದ್ದರು. ಆಗ ಹರಿನಾಥ್ ಮೇಯರ್ ಆಗಿದ್ದರು. ಶಾಸಕರಾಗಿದ್ದ ಜೆ.ಆರ್.ಲೋಬೊ ಹಾಗೂ ಮನಪಾ ಸದಸ್ಯೆಯಾಗಿದ್ದ ಕವಿತಾ ವಾಸು ಭಾಗವಹಿಸಿದ್ದರು.

ಕಾಲ್ನಡಿಗೆ ಪಥ, ಕುಳಿತುಕೊಳ್ಳಲು ನಾಲ್ಕೈದು ಕಲ್ಲು ಬೆಂಚು, ಧ್ವಜಸ್ತಂಭ ಇದರೊಳಗಿದೆ. ಹೂವಿನ ಹಾಗೂ ಅಲಂಕಾರಿಕ ಗಿಡಗಳು ಒಣಗಿವೆ. ಈ ಪಾರ್ಕ್‌ಗೆ ಗೇಟ್ ಅಳವಡಿಸಿ, ಸುತ್ತಲೂ ನದಿ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿಯನ್ನೂ ಅಳವಡಿಸಲಾಗಿದೆ.

ನದಿ ವೀಕ್ಷಣೆಗೆ ಹಲವಾರು ಮಂದಿ ಇಲ್ಲಿ ಬರುತ್ತಿದ್ದಾರೆ. ಮದುವೆಯಾಗಿ ಫೋಟೋ ಶೂಟ್‌ಗೆ ಛಾಯಾಚಿತ್ರಗ್ರಾಹಕರು ಈ ಸ್ಥಳದಲ್ಲಿ ಚಿತ್ರೀಕರಣ ನಡೆಸುತ್ತಾರೆ. ಸಾಯಂಕಾಲದ ವೇಳೆ ಹಲವು ಮಂದಿ ವಿಶ್ರಾಂತಿಗಾಗಿ ಇಲ್ಲಿ ಬರುತ್ತಿದ್ದಾರೆ. ಶೌಚಗೃಹ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಯಾವುದಕ್ಕೂ ನಿರ್ವಹಣೆ ಇಲ್ಲ.

ಅನೈತಿಕ ಚಟುವಟಿಕೆ ಪಾರ್ಕ್‌ಗೆ ಕಬ್ಬಿಣದ ಗೇಟಿದೆ. ಆದರೂ ರಾತ್ರಿ ವೇಳೆ ಇದನ್ನು ತೆಗೆದು ಒಳ ಪ್ರವೇಶಿಸುವ ಕಿಡಿಗೇಡಿಗಳು ಇಲ್ಲಿ ಪಾರ್ಟಿ ಆಯೋಜಿಸುತ್ತಾರೆ. ಬಳಿಕ ಮದ್ಯದ ಬಾಟಲಿಗಳನ್ನು ನೀರಿಗೆ ಎಸೆಯುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ. ಸಿಗರೇಟ್, ಗುಟ್ಕಾ ಪ್ಯಾಕೆಟ್‌ಗಳು ಹರಡಿಕೊಂಡಿವೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಸಾರ್ವಜನಿಕರ ಆರೋಪ.

ಮಹಾನಗರ ಪಾಲಿಕೆ ಲಕ್ಷಾಂತರ ರೂ.ವೆಚ್ಚ ಮಾಡಿ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಅದು ನಿರ್ವಹಣೆ ಕೊರತೆಯಿಂದ ವರ್ಷದೊಳಗೆ ಹಾಳಾಗುತ್ತದೆ. ಸಮರ್ಪಕ ನಿರ್ವಹಣೆಯ ಗೋಜಿಗೆ ಮನಪಾ ಆಸಕ್ತಿ ವಹಿಸುತ್ತಿಲ್ಲ. ಅಲ್ಲಿ ಹೂವು, ಅಲಂಕಾರಿಕ ಗಿಡ ನೆಡಲಾಗುತ್ತದೆ. ಆದರೆ ಅದಕ್ಕೆ ನೀರು ಹಾಕಿ ಪೋಷಣೆ ಮಾಡುವ ಪ್ರಯತ್ನ ಮಾಡುವುದಿಲ್ಲ. - ಜಯರಾಮ ಮಂಗಳೂರು, ಖಾಸಗಿ ಉದ್ಯೋಗಿ ಬೋಳಾರ ರಿವರ್ ವಿವ್ಯೂ ಪಾರ್ಕ್‌ನಲ್ಲಿ ನಿರ್ವಹಣೆಯ ಕೊರತೆ ಗಮನಕ್ಕೆ ಬಂದಿದೆ. ನಾವು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಇದರ ಅಭಿವೃದ್ಧಿ ಮತ್ತು ನಿರ್ವಹಣೆಗೆ ಒತ್ತು ನೀಡಲಾಗುವುದು. - ಭಾನುಮತಿ ಪಿ.ಎಸ್. ಮನಪಾ ಚುನಾಯಿತ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net