

ಶೃಂಗೇರಿ: ದೇಶದಲ್ಲಿ ಗಂಗಾ, ಯಮುನಾ, ಕಾವೇರಿ, ತಾಮಪರ್ಣಿ, ಕೃಷ್ಣಾ, ಗೋದಾವರಿ, ಗಂಗಾ ಮುಂತಾದ ಪವಿತ್ರವಾದ ನದಿಗಳಿವೆ. ನಮ್ಮ ಶರೀರಕ್ಕೆ ಪ್ರಾಣದಂತೆ ನದಿಗಳು ಅಷ್ಟೇ ಮುಖ್ಯ. ನದಿಗಳು ಇಲ್ಲವಾದರೆ ಜೀವನ ಕಷ್ಟ. ಮನುಷ್ಯ ಹಾಗೂ ಪ್ರಾಣಿಗಳು ಆಹಾರ ಸೇವಿಸದೆ ಬದುಕಬಹುದು. ಆದರೆ ನೀರಿಲ್ಲದಿದ್ದರೆ ಬದುಕು ಕಷ್ಟ. ಜಲವಿದ್ದರೆ ಜೀವನ. ನೀರಿಗೆ ಆಶ್ರಯ ನೀಡುವ ನದಿಗಳ ಪವಿತ್ರತೆ ಕಾಪಾಡುವುದು ಎಲ್ಲರ ಧರ್ಮ ಎಂದು ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.
ತುಂಗಾಭದ್ರಾ ಪುಷ್ಕರ ಮಹೋತ್ಸವದ ಅಂಗವಾಗಿ ಶ್ರೀಮಠದ ನರಸಿಂಹವನದ ಗುರುನಿವಾಸದಲ್ಲಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಅನುಗ್ರಹ ಸಂದೇಶ ನೀಡಿದರು.
ನದಿಗಳ ಪಾವಿತ್ರತ್ಯೆ ಕುರಿತು ಎಲ್ಲರಿಗೂ ಅರಿವು ಅಗತ್ಯ. ನದಿಗಳಿಗೆ ಹಾನಿ ಮಾಡಿದರೆ ನಮಗೆ ನಾವು ಹಾನಿ ಮಾಡಿಕೊಂಡತೆ. ನಾವು ಕುಳಿತುಕೊಂಡ ಮರದ ರೆಂಬೆಯನ್ನು ಕಡಿದರೆ ನಾವು ಕೆಳಗೆ ಬೀಳುತ್ತೇವೆ. ಮಾನವನ ಅತಿಯಾದ ಚಟುವಟಿಕೆಗಳಿಂದ ಪ್ರಕೃತಿ ಹಾಗೂ ನದಿಗಳಿಗೆ ಹಾನಿಯಾಗುತ್ತಿದೆ. ನದಿಗಳು ಎಂದರೆ ನೀರನ್ನು ನೀಡುವ ಜಡವಾದ ಪದಾರ್ಥವಲ್ಲ. ನದಿಯಲ್ಲಿ ದೇವತೆ ನೆಲೆಸಿರುತ್ತಾಳೆ. ಹಾಗಾಗಿ ನದಿ ಎಂದರೆ ದೇವತಾ ಸ್ವರೂಪಿಣಿ ಎಂದು ಭಾವಿಸಬೇಕು. ನದಿಯಲ್ಲಿ ಸ್ನಾನ ಮಾಡಿದರೆ ಶರೀರದ ಕೊಳೆ ಜತೆ ಆಂತರಿಕ ಕೊಳೆ ನಾಶವಾಗಲಿದೆ ಎಂದರು.