

ಕಾರ್ಕಳ: ತಾಲೂಕಾದ್ಯಂತ ಸುರಿದ ಭಾರಿ ಮಳೆಗೆ ಶಾಂಭವಿ ನದಿ ಉಕ್ಕಿ ಹರಿದ ಪರಿಣಾಮ ಇನ್ನಾ ಗ್ರಾಮದ ಬಹುತೇಕ ಭತ್ತದ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ.
ಇನ್ನಾ ಪಲಿಮಾರು ಸಾಗುವ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಇನ್ನಾ ಗ್ರಾಮದಿಂದ ಮುಂಡ್ಕೂರು ಗ್ರಾಮ ಸಂಪರ್ಕಿಸುವ ರಸ್ತೆ ನೆರೆ ನೀರಿನಿಂದ ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಶಾಂಭವಿ ನದಿಯ ಉಪ ನದಿಯೂ ಉಕ್ಕಿ ಹರಿದ ಪರಿಣಾಮ ಇನ್ನಾ ಗ್ರಾಮದಲ್ಲಿ ನಾಗಬನ ಸಂಪೂರ್ಣ ಮುಳುಗಡೆಯಾಗಿತ್ತು. ಬೋಳ ಗ್ರಾಮದಲ್ಲಿ ಪಿಲಿಯೂರು ಸೇತುವೆ ಮೇಲೆ ನದಿಯ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಸುತ್ತಿ ಬಳಸಿಕೊಂಡು ಸಾಗಬೇಕಾಯಿತು. ಬೆಳ್ಮಣ್‌ನಿಂದ ಕಟೀಲು ಬಜ್ಪೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮುಂಡ್ಕೂರು ಪಡಿತ್ತಾರು ಬಳಿಯಲ್ಲಿ ರಸ್ತೆ ಮುಳುಗಡೆಯಿಂದ ಜನ ಸಂಚಾರ, ವಾಹನ ಓಡಾಟಕ್ಕೂ ಸಮಸ್ಯೆಯಾಯಿತು.