

ಜೊಯಿಡಾ: ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಅರಣ್ಯ ಮತ್ತು ಕಂದಾಯ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಲಕ್ಷಾಂತರ ರೂಪಾಯಿ ಮೌಲ್ಯದ ಮರಳನ್ನು ವಶಕ್ಕೆ ಪಡೆದ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಕಾರ್ಯಾಚರಣೆ ನಡೆಸಿದ ಜೊಯಿಡಾ ತಹಸೀಲ್ದಾರ್ ಬಸವರಾಜ ತೆರನಹಳ್ಳಿ ನೇತೃತ್ವದ ತಂಡ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈಜಗಾಂವ, ದುಪಕರವಾಡಾ, ಅಮಶೇತ ಗಾಳಿವಾಡಾ, ಪಾಯಸವಾಡಿಯಲ್ಲಿ ದಾಸ್ತಾನು ಮಾಡಲಾಗಿದ್ದ 25 ಟಿಪ್ಪರ್‌ಗಳಿಗೂ ಅಧಿಕ ಅಕ್ರಮ ಮರಳನ್ನು ಪತ್ತೆ ಹಚ್ಚಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಕಂದಾಯ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನೇಮಿಸಿ ಲೋಕೊಪಯೋಗಿ ಇಲಾಖೆಯವರು ಹರಾಜು ಪ್ರಕ್ರಿಯೆ ನಡೆಸುವತನಕ ಸೂಕ್ತ ಬಂದೋಬಸ್ತ್ ಒದಗಿಸಲು ಜೊಯಿಡಾ ತಹಸೀಲ್ದಾರ್ ಆದೇಶಿಸಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಟಿಪ್ಪರ್ ಮರಳಿಗೆ 20ರಿಂದ 24 ಸಾವಿರ ರೂಗಳಿದ್ದು, ಇದು ಒಟ್ಟಾರೆ 6 ಲಕ್ಷ ರೂ.ಗಳಿಗಿಂತ ಅಧಿಕ ಮೌಲ್ಯದ್ದಾಗಿದೆ.
ಸರ್ಕಾರಿ ದರ ಒಂದು ಟಿಪ್ಪರ್ ಮರಳಿಗೆ ಸುಮಾರು 14 ಸಾವಿರ ಆಗಲಿದ್ದು, ಲೋಕೋಪಯೋಗಿ ಇಲಾಖೆಯಿಂದ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಶುಕ್ರವಾರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಶಾಸಕ ಆರ್.ವಿ. ದೇಶಪಾಂಡೆಯವರು ಅಕ್ರಮ ಮರಳು ಸ್ಮಗ್ಲಿಂಗ್ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಹಾಯಕ ಕಮಿಷನರ್ ಕಾರವಾರ ಜಯಲಕ್ಷ್ಮಿ ರಾಯಕೊಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಜೊಯಿಡಾ ತಹಸೀಲ್ದಾರ್ ಬಸವರಾಜ ಟಿ. ರಾಮನಗರ, ಪಿಎಸ್‌ಐ ಬಸವರಾಜ ಮಬನೂರ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.