

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಕಲ್ಲೋಳ ಗ್ರಾಮದ ಕೃಷ್ಣಾ ನದಿಗೆ 1,08,501 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 84,917 ಕ್ಯೂಸೆಕ್ ನೀರು ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗೆ ಹರಿದು ಬರುತ್ತಿದೆ. ಕೃಷ್ಣಾ ನದಿ ಸೇರಿ ಉಪ ನದಿಗಳ ನೀರಿನ ಮಟ್ಟ 2 ಅಡಿಯಷ್ಟು ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ನದಿತೀರದ ಜನರಲ್ಲಿ ಪ್ರವಾಹ ಭೀತಿ ಆವರಿಸಿದೆ. ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ 8 ಬ್ಯಾರೇಜ್‌ಗಳು ಜಲಾವೃತಗೊಂಡಿವೆ. ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ಧಾಳ, ವೇದಗಂಗಾ ನದಿಯ ಬಾರವಾಡ-ಕುನ್ನೂರ, ಬೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ರಾಯಬಾಗ ತಾಲೂಕಿನ ಕುಡಚಿ ಸೇತುವೆಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದರು.
ಹಾರಿದ ಪತ್ರಾಸ್: ಭಾನುವಾರ ಸಂಜೆ ಖಾನಾಪುರ ತಾಲೂಕಿನ ಕುಪಟಗಿರಿಯಲ್ಲಿ ಭಾರೀ ಬಿರುಗಾಳಿಗೆ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯ ತಗಡಿನ ಪತ್ರಾಸ್ ಹಾರಿಹೋಗಿವೆ. ಅಂದು ರಜೆ ದಿನವಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಶಾಲಾ ಸಾಮಗ್ರಿಗಳೆಲ್ಲವೂ ನೆನೆದಿವೆ. ಸೋಮವಾರ ಬೆಳಗ್ಗೆ ಬಂದಿದ್ದ ವಿದ್ಯಾರ್ಥಿಗಳು ಹೊರಾಂಗಣದಲ್ಲೇ ಇರಬೇಕಾಯಿತು. ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಮುಂದಿನ ಎರಡು ದಿನಗಳಲ್ಲಿ ಈ ಶಾಲೆಯ ಪತ್ರಾಸ್‌ಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಮಳೆಗೆ ಬಿಜಗರ್ಣಿ ಗ್ರಾಮದಲ್ಲಿ ಮನೆಗೋಡೆ ಕುಸಿದಿದೆ.