

ಕೂಡಲಸಂಗಮ: ಬದುಕಿಗೆ ನೀರು ಅಗತ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭಾ ನದಿ ಕಲುಷಿತಗೊಳ್ಳದಂತೆ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಪ್ರವೇಶ ದ್ವಾರದ ಎದುರು ಸೋಮವಾರ ಆಯೊಜಿಸಿದ್ದ ಕೃಷ್ಣಾ ಜಲಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನದಿಗಳನ್ನು ರಕ್ಷಣೆ ಮಾಡದೆ ಇದ್ದರೆ, ಮುಂದಿನ ಪೀಳಿಗೆಗೆ ನಾವು ಅನ್ಯಾಯ ಮಾಡಿದಂತೆ. ಹುನಗುಂದ ತಾಲೂಕಿನ 60 ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಕಲ್ಪಿಸುವ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದನ್ನು ಬಳಸಿಕೊಳ್ಳುವ ತಾಳ್ಮೆ ನಮ್ಮ ರೈತರಿಗೆ ಇಲ್ಲ. ಈ ಯೋಜನೆಯನ್ನು ಮತ್ತಷ್ಟು ಸುಧಾರಿಸಿ ಜಾರಿಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ರಾಜೇಂದ್ರ ಪೊದ್ದಾರ ಮಾತನಾಡಿ, ಕೃಷ್ಣಾ ನದಿಯ ಉಗಮ ಸ್ಥಾನ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯ ನಾಶ, ನದಿ ತೀರಗಳ ಒತ್ತುವರಿ, ಮರಳು ಗಣಿಗಾರಿಕೆ ಮತ್ತಿತರ ಕಾರ್ಯಗಳಿಂದ ನದಿಯ ಆಳ ಕಡಿಮೆಯಾಗಿ, ಹೂಳಿನ ಪ್ರಮಾಣ ಅಧಿಕವಾಗುತ್ತಿದೆ. ಕಾರ್ಖಾನೆಗಳಿಂದ ನದಿ ತೀರ ಹೆಚ್ಚು ಕಲ್ಮಶಗೊಳ್ಳುತ್ತಿದ್ದು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಮನಗೂಳಿ ವಿರತೀಶಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಬುದ್ಧ ಪೂರ್ಣಿಮೆಯ ದಿನ ಕೃಷ್ಣಾ ನದಿ ಸಂರಕ್ಷಣೆಗಾಗಿ ಜಲಯಾತ್ರೆ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಲಿಂಗಾಯತರ ಪವಿತ್ರ ಸ್ಥಳ ಕೂಡಲಸಂಗಮದಿಂದ ಯಾತ್ರೆ ಹೊರಟಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ಮುಖಂಡ ಎಂ.ಪಿ. ನಾಡಗೌಡ ಮಾತನಾಡಿದರು.
ಬಸವನ ಬಾಗೇವಾಡಿ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ನದಿ ಸಂರಕ್ಷಣೆ ಹೋರಾಟಗಾರ ಆಂಧ್ರಪ್ರದೇಶದ ಸತ್ಯನಾರಾಯಣ್ಣ, ಮಹಾರಾಷ್ಟ್ರದ ನರೇಂದ್ರ ಚೂಘ, ಅಮರೇಶ ನಾಗೂರ, ಗಂಗಾಧರ ದೊಡಮನಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ರಾಂಪೂರ ಮತ್ತಿತರರಿದ್ದರು.
ನದಿ ಸಂರಕ್ಷಣೆಗೆ ಸೂಚನೆ: ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ಕೃಷ್ಣಾ ಹಾಗೂ ಮಲಪ್ರಭಾ ನದಿ ದಡ ತಾಜ್ಯದಿಂದ ಕೂಡಿದ್ದು ಗಬ್ಬು ನಾರುತ್ತಿದೆ. ಅಧಿಕ ಪ್ರಮಾಣದ ಬಟ್ಟೆಗಳು ಬಿದ್ದಿವೆ. ದಡದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವುದು ಸೇರಿ ಮತ್ತಿತರ ಕಾರ್ಯಗಳಿಂದ ನದಿ ಕಲುಷಿತಗೊಳ್ಳುತ್ತಿದ್ದು, ಸಂರಕ್ಷಣೆ ಮಾಡುವಂತೆ ಸ್ಥಳೀಯ ಮುಖಂಡರು ವಿನಂತಿಸಿದ ಹಿನ್ನೆಲೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಕರೆ ಮಾಡಿ ನದಿ ದಡವನ್ನು ಸ್ವಚ್ಛಗೊಳಿಸುವುದರ ಜತೆಗೆ ನಿರಂತರವಾಗಿ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.