

ಹೊಸಪೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಗರದ ಡಿಎಚ್‌ಒ ಕಚೇರಿಯಲ್ಲಿ ಮಂಗಳವಾರ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಡಿಎಚ್‌ಒ ಡಾ.ಶಂಕರ್‌ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 11 ರಿಂದ 14 ವರ್ಷದ ಹೆಣ್ಣುಮಕ್ಕಳಲ್ಲಿ ಪ್ರಾರಂಭವಾಗುವ ಋತುಚಕ್ರದ ಕುರಿತು ಪ್ರತಿಯೊಬ್ಬ ಕಿಶೋರಿಯಿಂದ ಹಿಡಿದು ಎಲ್ಲ ಮಹಿಳೆಯರು ಜಾಗೃತಿ ಹೊಂದಬೇಕು. ಋತುಸ್ರಾವವಾದಾಗ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಹೊಸದಾದ ಘೋಷಣೆಯೊಂದಿಗೆ ತಿಳಿಸುವ ವಿಶ್ವ ಋತುಚಕ್ರದ ನೈರ್ಮಲ್ಯ ದಿನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ಜಿಲ್ಲಾ ಡಿಎಂಓ ಅಧಿಕಾರಿ ಡಾ.ಕಮಲಮ್ಮ ಮಾತನಾಡಿ, ಋತುಚಕ್ರ ಅಥವಾ ಋತುಸ್ರಾವ ಈ ಸಂದರ್ಭದಲ್ಲಿ ಮಹಿಳೆಯರು ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಋತುಸ್ರಾವ ಉಂಟಾದಾಗ ಹಳೆಯದಾದ ಉಪಯೋಗಿಸಿದ ಬಟ್ಟೆಗಳನ್ನು ಬಳಸಬಾರದು. ಮಹಿಳೆಯರು ಅಶುದ್ಧ ಎನ್ನುವ ತಪ್ಪು ಕಲ್ಪನೆ ಇರಬಾರದು. ವಿಶೇಷವಾಗಿ ಋತುಚಕ್ರದ ಶುಚಿತ್ವ ನಿರ್ವಹಣೆಯ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ತಿಳಿವಳಿಕೆ ಹೊಂದಬೇಕಿದೆ ಎಂದರು.
ಜಿಲ್ಲಾ ಡಿಎಂಓ ಅಧಿಕಾರಿ ಡಾ.ಕಮಲಮ್ಮ, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ.ಆಶಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಇತರರಿದ್ದರು.