ರೈತ ಸಂಘದ ನಾಮಫಲಕ ಮರು ಅಳವಡಿಕೆ

06 HANUR 4
Published on

ಹನೂರು: ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪುಕಾಪಟ್ಟಿ ಹಾಗೂ ಆತೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದ ರೈತ ಸಂಘದ ಗ್ರಾಮ ಘಟಕದ ನಾಮಫಲಕವನ್ನು ಗುರುವಾರ ಸಂಘಟನೆ ಪದಾಧಿಕಾರಿಗಳು ಮತ್ತೆ ಅಳವಡಿಸಿದರು.


ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಆಲಂಬಾಡಿ, ಪುದುಕಾಡು, ಅಪ್ಪುಕಾಪಟ್ಟಿ ಹಾಗೂ ಆತೂರು ಗ್ರಾಮದಲ್ಲಿ ಸೆ.20ರಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ರಚಿಸಿ ನಾಮಫಲಕ ಅಳವಡಿಸಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಾಮಫಲಕ ಅಳವಡಿಸಲು ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಅಪ್ಪುಕಾಪಟ್ಟಿ ಹಾಗೂ ಆತೂರು ಗ್ರಾಮದಲ್ಲಿ ಅಳವಡಿಸಿದ್ದ ನಾಮಫಲಕ ತೆರವುಗೊಳಿಸಿದ್ದರು. ಹಾಗೆಯೇ ಆಲಂಬಾಡಿ ಗ್ರಾಮದಲ್ಲಿ ನಾಮಫಲಕ ತೆರವುಗೊಳಿಸಲು ಮುಂದಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಅಳವಡಿಕೆಗೆ ಅನುಮತಿ ನೀಡಿ ನಾಮಫಲಕ ವಾಪಸ್ ನೀಡಿದ್ದು, ಇದೀಗ ಮತ್ತೆ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.


ಈ ನಾಲ್ಕು ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗೂ ಇನ್ನಿತರ ಅಗತ್ಯ ಸೌಕರ್ಯ ಕಲ್ಪಿಸಿ ಕೊಡುವಂತೆ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ಪ್ರಭು ಅವರು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಪೋನ್ ಕರೆ ಮಾಡಿ ಮನವಿ ಮಾಡಿದರು. ದಸರಾ ಬಳಿಕ ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಮೂಲಸೌಕರ್ಯ ಒದಗಿಸಿ ಕೊಡುವುದಾಗಿ ಡಿಸಿ ಭರವಸೆ ನೀಡಿದ್ದಾರೆ. ಇನ್ನು ಈ ಗ್ರಾಮಗಳ ಅರಣ್ಯದಂಚಿನಲ್ಲಿ ಕೃಷಿ ಮಾಡುತ್ತಿರುವವರಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಗೌಡೇಗೌಡ ತಿಳಿಸಿದರು.


ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಪದಾಧಿಕಾರಿಗಳಾದ ತಂಗವೇಲು, ರತ್ನವೇಲು, ಗೋವಿಂದರಾಜು, ಪೆರಿಯಸ್ವಾಮಿ, ಮಾದೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net