ಜಾಗತಿಕ ತಾಪಮಾನ ಹೆಚ್ಚಳ ಅಪಾಯ

ಫೋಟೋ ಶೀರ್ಷಿಕೆ 06 ಸಿಆರ್_ಪಿ-1ಎ
ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣ್ ಕುಮಾರಿ, ಪರಿಸರ ಪ್ರೇಮಿ ಚ.ನಾ.ಅಶೋಕ್ ಸೇರಿದಂತೆ ಗಣ್ಯರು ಗಿಡ ನೆಟ್ಟು ನೀರೆರೆದರು. ಜೆ.ಎಂ.ಪಲ್ಲವಿ, ಡಾ.ವಿಶ್ವನಾಥ್ ಕೋಳಿವಾಡ, ಡಿ.ಎ.ವಾಸು, ಸಿ.ಎನ್.ರಾಘವೇಂದ್ರ ಇದ್ದರು.
Published on

ಚನ್ನರಾಯಪಟ್ಟಣ: ನಾವು ಪರಿಸರವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ಕಾಳಜಿ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಅರುಣ್ ಕುಮಾರಿ ಅಭಿಪ್ರಾಯಪಟ್ಟರು.


ವಿಶ್ವ ಪರಿಸರ ದಿನದ ಅಂಗವಾಗಿ ಪಟ್ಟಣದ ಶ್ರೀ ವಿವೇಕಾನಂದ ಅಂತಾರಾಷ್ಟ್ರೀಯ ಶಾಲೆಯಲ್ಲಿ ಗುರುವಾರ ಮಕ್ಕಳ ಸಾಹಿತ್ಯ ಪರಿಷತ್, ಪ್ರಾದೇಶಿಕ ಅರಣ್ಯ ವಲಯ, ತಾಲೂಕು ಕಾನೂನು ಸೇವೆಗಳ ಸಲಹಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರದಿಂದ ಮಾನವನೇ ಹೊರತು ಮಾನವನಿಂದ ಪರಿಸರವಿಲ್ಲ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸೂರೆಗೈಯ್ಯುತ್ತಿರುವುದೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಬೇಕಾದರೆ ಪರಿಸರ ರಕ್ಷಣೆ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.


ಜಾಗತಿಕ ತಾಪಮಾನ ಹೆಚ್ಚಲು, ಪರಿಸರ ಮಾಲಿನ್ಯಕ್ಕೆ ನಾವೇ ಕಾರಣ. ಪರಿಸರ ಜಗತ್ತಿನ ಜೀವಾಳ. ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಪರಿಸರ ನಾಶದಿಂದ ಇಂದು ಸರಿಯಾಗಿ ಮಳೆ ಆಗುತ್ತಿಲ್ಲ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬಿಸಿಲಿನ ತಾಪ ಹೆಚ್ಚಳವಾಗಿ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಒಂದೊಂದು ಸಸಿಗಳನ್ನು ನೆಡಬೇಕು. ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದರು.


ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿ, ಸ್ವಾರ್ಥಕ್ಕಾಗಿ ನಾವು ಪರಿಸರ ನಾಶ ಮಾಡಿ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗಲಿದೆ. ವಾಯು ಜೀವಧಾತು. ಗಾಳಿಯಿಲ್ಲದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಇಂತಹ ವಾಯು ವಿಷವಾಗುತ್ತಿದೆ. ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ವಿಷಾನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಅಲ್ಲದೆ ಕೃಷಿ, ರಸ್ತೆ, ಜನವಸತಿಯಂತಹ ಯೋಜನೆಗಳಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ ನೈಸರ್ಗಿಕವಾಗಿ ವಾಯುಮಂಡಲ ಸ್ವಚ್ಛವಾಗುತ್ತಿಲ್ಲ. ಹೀಗೆ ವಾಯು ಮಲಿನವಾಗುತ್ತಿದೆ ಎಂದು ಹೇಳಿದರು.
ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಮಾನವನ ಸ್ವಾರ್ಥ ಮತ್ತು ನಿರ್ಲಕ್ಷ್ಯದಿಂದ ದಿನೇ ದಿನೆ ಕಲುಷಿತಗೊಳ್ಳುತ್ತಿರುವ ಪರಿಸರದಲ್ಲಿ ತೀವ್ರಗೊಳ್ಳುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ಮೂಲಕ ಸ್ವಚ್ಛ ಹಾಗೂ ಶುದ್ಧ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಹವಾಮಾನ ವೈಪರೀತ್ಯ ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಭೂಮಿಯ ಒಡಲನ್ನು ಸೇರುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದೆ. ಪರಿಸರಕ್ಕೆ ಧಕ್ಕೆಯನ್ನುಂಟು ಮಾಡದೆ ಭವಿಷ್ಯತ್ತಿಗಾಗಿ ಪ್ರಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕಾದದ್ದು ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ವಕೀಲೆ ಚಂದನಾ ಭೂ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರತಡೆಯುವಿಕೆ ಕುರಿತು ಉಪನ್ಯಾಸ ನೀಡಿದರು. ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸುನಿತಾ ಮಾತನಾಡಿದರು. ವಿವೇಕಾನಂದ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಡಾ.ವಿಶ್ವನಾಥ್ ಕೋಳಿವಾಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎ.ವಾಸು, ಕಾರ್ಯದರ್ಶಿ ಸಿ.ಎನ್.ರಾಘವೇಂದ್ರ, ವಲಯ ಅರಣ್ಯ ಅಧಿಕಾರಿ ಜೆ.ಎಂ.ಪಲ್ಲವಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net