

ಸಿಂಧನೂರು: ತಾಲೂಕಿನ ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಂಡಾ ಗ್ರಾಮದಲ್ಲಿ ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ನಂದಿತಾ ನೇತೃತ್ವದಲ್ಲಿ ಗಂಡಾಂತರ ಗರ್ಭಿಣಿಯರ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಬುಧವಾರ ನಡೆಸಲಾಯಿತು.
ಡಾ.ನಂದಿತಾ ಮಾತನಾಡಿ, ಗರ್ಭಿಣಿಯರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಿಂಧನೂರು ತಾಲೂಕಿನ ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಗ್ರಾಮಗಳು ಹಾಗೂ 5 ಕ್ಯಾಂಪ್ ಒಳಗೊಂಡಿದ್ದು, ಒಟ್ಟು 6,588 ಜನಸಂಖ್ಯೆ ಇದೆ. 1,133 ಮನೆಗಳಲ್ಲಿ ಒಟ್ಟು 40 ಗರ್ಭಿಣಿಯರು ಇದ್ದು ಅದರಲ್ಲಿ 26 ಗಂಡಾಂತರ ಗರ್ಭಿಣಿಯರನ್ನು ಗುರುತಿಸಲಾಗಿದೆ. ಇವರಿಗೆ ಅಗತ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಹಾಗೂ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು. ಸ್ಕ್ಯಾನಿಂಗ್, ರಕ್ತ ತಪಾಸಣೆ, ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ ಎಫ್ಸಿಎಂ ಮತ್ತು ರಕ್ತ ವರ್ಗಾವಣೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಳಿಸಲಾಗುವುದು.
ಪ್ರತಿ ತಿಂಗಳು 9ರಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿಯೇ ವಿಶೇಷವಾಗಿ ಆರೋಗ್ಯ ಸೇವೆ ನೀಡಲಾಗುವುದು. ಪ್ರತಿವಾರ ಗರ್ಭಿಣಿಯರ ನೋಂದಣಿ, ಗರ್ಭಿಣಿಯರಿಗೆ ಲಸಿಕೆ ನೀಡುವುದು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೇವನೆ, ರಕ್ತ ಹೀನತೆ ಕುರಿತು ಜಾಗೃತಿ ಮೂಡಿಸುವುದರ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ್ ಇತರರಿದ್ದರು.