

ಮೈಸೂರು: ಆಧುನಿಕ ಜಗತ್ತಿನಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಾಗ ಇರುವ ಅಪಾಯ ಹಾಗೂ ಇನ್ನಿತರ ಸವಾಲುಗಳನ್ನು ಅರಿಯಬೇಕಿದೆ ಎಂದು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಡಾ.ಎ.ಎನ್.ಸಂತೋಷ್ ಕುಮಾರ್ ಸಲಹೆ ನೀಡಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವತಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಿಸಿಐಪಿ-2023 5ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಡಿಜಿಟಲ್ ಕೆಲಸಕ್ಕಾಗಿ ನಮ್ಮ ಖಾಸಗಿ ಮಾಹಿತಿ ನೀಡುವಾಗ ಸತ್ಯಾಸತ್ಯತೆ ಪರಿಶೀಲಿಸಿಕೊಳ್ಳಬೇಕು ಎಂದರು.
ವಿಶ್ವದಲ್ಲಿ ಹವಮಾನ ಬದಲಾವಣೆ, ಆಹಾರದ ಕೊರತೆ, ಆರೋಗ್ಯ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಚಾರ ವಿನಿಮಯದ ಅಗತ್ಯವಿದೆ ಎಂದರು.
ಪ್ರಸ್ತುತ ರೈತರು ಬೆಳೆಯುವ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹಣ ವ್ಯಯಿಸಿ ಕೃಷಿ ಕೈಗೊಂಡವರು ಅದಕ್ಕೆ ತಕ್ಕಂತೆ ಹಣ ವಾಪಾಸ್ಸು ಬಾರದಿದ್ದಾಗ ಆಘಾತಕ್ಕೆ ಒಳಗಾಗುತ್ತಾರೆ. ಇಂತಹ ಸನ್ನಿವೇಶವನ್ನು ದೂರವಾಗಿಸಲು ಕೃಷಿ ವಿಜ್ಞಾನಿಗಳು ಇಂತಹ ಪ್ರದೇಶದಲ್ಲಿ ಇಷ್ಟು ಬೆಳೆ ಬೆಳೆಯಬೇಕೆಂಬ ನಿಯಮ ಮಾಡಬೇಕು. ಅದಕ್ಕಾಗಿ ಸಂಶೋಧನೆಗಳು ನಡೆಯಬೇಕೆಂದು ಸಲಹೆ ನೀಡಿದರು.
ಮಲೇಷ್ಯಾ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಮಾಹಿತಿ ತಂತ್ರಜ್ಞಾನ ಶಾಲೆಯ ಡೀನ್ ಪ್ರೊ.ಪಿ.ಸೆಲ್ಲಪ್ಪನ್ ಪಳನಿಯಪ್ಪನ್,
ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ.ಸುರೇಶ್, ಪ್ರಾಂಶುಪಾಲ ಡಾ.ಸಿ.ನಟರಾಜು ಇತರರಿದ್ದರು.