

ವಿಜಯಪುರ: ಹೆಚ್ಚುತ್ತಿರುವ ಭೂ ಹಗರಣಗಳ ಪ್ರಕರಣಗಳ ಬಗ್ಗೆ ಸದನದಲ್ಲಿ ಸಮಗ್ರವಾಗಿ ಚರ್ಚೆಯಾಗಲಿದೆ. ಅಲ್ಲದೇ, ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಶೀಘ್ರದಲ್ಲಿಯೇ ರೂಪುರೇಷೆ ಸಹ ಸಿದ್ಧಪಡಿಸಲಾಗುವುದೆಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಂಡು ಬಂದ ಭೂಹಗರಣ ಹಾಗೂ ವಿಜಯಪುರ ನಗರದಲ್ಲಿ ಕಂಡು ಬರುತ್ತಿರುವ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಗುರುವಾರ ಪಕ್ಷದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪಕ್ಷದ ಮಾಜಿ ಸಚಿವರು ಹೋರಾಟ ನಡೆಸಿದ್ದಾರೆ. ಪ್ರಬಲವಾಗಿ ಧ್ವನಿ ಎತ್ತಿದ್ದಾರೆ. ನಗರದಲ್ಲಿರುವ ಪಕ್ಷದ ಶಾಸಕರು ಸಹ ಆ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಸದನದಲ್ಲೂ ಪಕ್ಷದ ಶಾಸಕರು ಈ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ತಿಳಿಸಿದರು.
ಭೂ ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ಆಗಬೇಕು, ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕೆಂದು ಆಗ್ರಹಿಸುವೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ಸಹ ಹಮ್ಮಿಕೊಳ್ಳುವುದಾಗಿ ಕೂಚಬಾಳ ತಿಳಿಸಿದರು.
ಮುದ್ದೇಬಿಹಾಳದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಮತ್ತು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವಿಚಾರ ಕುರಿತು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೂಚಬಾಳ ಅವರು, ಆ ಪ್ರಕರಣವನ್ನೂ ಖಂಡಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೆಯ ಐಹೊಳೆ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ವಿಜಯ ಜೋಶಿ, ಶರಣಬಸವ ಕುಂಬಾರ ಮತ್ತಿತರರಿದ್ದರು.
ಮುಡಾ ಹಗರಣ; ಸಿಬಿಐ ತನಿಖೆಗೆ ಒಪ್ಪಿಸಿ
ಮುಡಾ ಹಗರಣವನ್ನು ನ್ಯಾಯಾಂಗ ತನಿಖೆ ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಆಗ್ರಹಿಸಿದರು.
ಎಸ್‌ಐಟಿ ತನಿಖೆ ಸಮರ್ಪಕವಲ್ಲ. ಸಮಗ್ರ ತನಿಖೆ ಎಸ್‌ಐಟಿಯಿಂದ ಸಾಧ್ಯವಿಲ್ಲ. ಇದೊಂದು ಲೂಟಿಕೋರ ಸರ್ಕಾರ. ಇವರಿಂದ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕಂಡು ಬಂದ ಹಗರಣಗಳೆಲ್ಲವನ್ನೂ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.