ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಪರಿಶೀಲಿಸಿದ ಸಿಇಒ ರಿಷಿ ಆನಂದ

TEACHERS COUNSELING
ವಿಜಯಪುರದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಸ್ಥಳಕ್ಕೆ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು. ಡಿಡಿಪಿಐ ಎನ್.ಎಚ್. ನಾಗೂರ, ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಟಿಜಿಟಿ ಮಳೆಯ ನಡುವೆಯೂ ಸಾಂಗವಾಗಿ ನೆರವೇರುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಸ್ಥಳಕ್ಕೆ ಗುರುವಾರ ಜಿಪಂ ಸಿಇಒ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿನ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ 2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ನಡೆಯುತ್ತಿದೆ. ಕಾರ್ಯನಿಮಿತ್ತ ಜಿಲ್ಲಾಡಳಿತ ಕಚೇರಿಗೆ ತೆರಳುತ್ತಿದ್ದ ಸಿಇಒ ಅವರು ಹತ್ತಿರದಲ್ಲಿಯೇ ನಡೆಯುತ್ತಿರುವ ಕೌನ್ಸೆಲಿಂಗ್ ಪ್ರಕ್ರಿಯೆ ಪರಿಶೀಲಿಸಲೆಂದು ಸ್ಥಳಕ್ಕೆ ಭೇಟಿ ನೀಡಿದರು.

ಅಲ್ಲಿನ ಶಿಕ್ಷಕರನ್ನುದ್ದೇಶಿಸಿ, ಕೌನ್ಸೆಲಿಂಗ್ ಪ್ರಕ್ರಿಯೆ ಮೂಲಕ ವಿವಿಧ ಪ್ರಾಧಾನ್ಯತೆಗಳಡಿಯಲ್ಲಿ ತಮಗೆ ಅನುಕೂಲವಾಗುವ ಸ್ಥಳಗಳಲ್ಲಿ ವರ್ಗಾವಣೆ ಪಡೆಯುವ ಶಿಕ್ಷಕರು ಸಂತೃಪ್ತಿಯಿಂದ ಬೋಧನಾ ಕಾರ್ಯವನ್ನು ನಿರ್ವಹಿಸಿ ಇಲಾಖೆಯ ಗುರಿ ಉದ್ದೇಶಗಳ ಸಫಲತೆಗೆ ಹೆಚ್ಚು ಪರಿಶ್ರಮವಹಿಸಬೇಕೆಂದರು.

ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಜಿಲ್ಲೆಯ ಎಲ್ಲ ಶಾಲೆ ಶಿಕ್ಷಕರು ವೃತ್ತಿಪರ ಕೌಶಲಗಳನ್ನು ಬಳಸಿಕೊಂಡು ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿರುವ ಶಿಕ್ಷಕರು ಆನ್-ಲೈನ್ ಪ್ರಕ್ರಿಯೆ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳುವ ಶಿಕ್ಷಕರಿಗೆ ಸ್ಥಳ ಆಯ್ಕೆ ಮಾಡಿಕೊಂಡಿರುವ ಆದೇಶಗಳನ್ನು ನೀಡಿದರು.
ಡಿಡಿಪಿಐ ಎನ್.ಎಚ್. ನಾಗೂರ, ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net