

ಹುಬ್ಬಳ್ಳಿ: ಮೂಗ ಮತ್ತು ಕಿವುಡ ಮಕ್ಕಳನ್ನು ನೋಡಿದರೆ ನಾವೆಲ್ಲರೂ ಎಲ್ಲಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ನಮ್ಮೆಲ್ಲರಿಗೂ ದೃಷ್ಟಿಯೇ ಸತ್ಯವಾಗಿರುತ್ತದೆ. ಯಾವುದನ್ನು ನೋಡದೆ ಮಾತಿನಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ದೃಷ್ಟಿದೋಷವುಳ್ಳ ಮಕ್ಕಳಿಗೆ ಕಲ್ಪನಾ ಶಕ್ತಿ ಹೆಚ್ಚಿರುತ್ತದೆ. ಇಂತಹ ಮಕ್ಕಳಿಗೆ ತಮ್ಮ ತತ್ವಗಳನ್ನು ಪ್ರಚುರಪಡಿಸಲು ರೋಟರಿ ಅಂಗವಿಕಲರ ಪುನಶ್ಚೇತನದಂತಹ ಸಂಸ್ಥೆಗಳು ಶ್ರಮಿಸುತ್ತಿವೆ. ಮಕ್ಕಳಿಗೆ ತರಬೇತಿ ನೀಡಿ ಅವರಲ್ಲಿರುವ ಭಾವನೆ ಹೊರಹಾಕಲು ಪ್ರಯತ್ನಿಸುತ್ತಿರುವುದು ಸಮಾಜಕ್ಕೆ ಮಾದರಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿವೇಕಾನಂದ ಕಾಲನಿಯ ರೋಟರಿ ಅಂಗವಿಕಲರ ಪುನಶ್ಚೇತನ ಸಂಸ್ಥೆಯ (ಆರ್‌ಐಆರ್‌ಎಚ್) ಡಾ. ಪಿ.ವಿ. ದತ್ತಿ ರೋಟರಿ ಶಾಲೆಯ ಸುವರ್ಣ ಮಹೋತ್ಸವ ಕಟ್ಟಡ ಹಾಗೂ ಡಾ. ಸುಶೀಲಾತಾಯಿ ಪಿ. ದತ್ತಿ ತಾಯಿ ಹಾಗೂ ಮಗುವಿನ ಮಾತಿನ ತರಬೇತಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಬಳಿ ಎಲ್ಲ ರೀತಿಯ ವಸ್ತುಗಳು ಇದ್ದರೆ ಬೆಲೆ ತಿಳಿಯುವುದಿಲ್ಲ. ಕೊರತೆ ಇದ್ದವರಿಗೆ ಮಾತ್ರ ಅದರ ಮಹತ್ವ ಗೊತ್ತಾಗುತ್ತದೆ. ಕೊರತೆ ಸರಿದೂಗಿಸಲೆಂದೇ ದೇವರು ಅಂಥವರಿಗೆ ಏನಾದರೊಂದು ಮಹತ್ವದ ಅಂಶ ಕೊಟ್ಟಿರುತ್ತಾನೆ ಎಂದು ಗುಣಗಾನ ಮಾಡಿದರು.
ಪ್ರಸ್ತುತ ದಿನಗಳಲ್ಲಿ ಇಲ್ಲದಿರುವ ಬಗ್ಗೆ ಯೋಚಿಸುವುದೇ ನಮ್ಮ ಸಂಸ್ಕೃತಿಯಾಗಿದೆ ಹೊರತು ಇದ್ದುದರಲ್ಲಿಯೇ ನೆಮ್ಮದಿ ಕಾಣುವ ಭಾವನೆ ನಮ್ಮಲ್ಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಕಿವುಡ ಮಕ್ಕಳಿಗೆ ಕಾಂಕ್ಲಿಯರ್ ಇನ್‌ಪ್ಲಾಂಟ್ ಅಳವಡಿಕೆ ಯೋಜನೆ ಜಾರಿಗೆ ತಂದಿದ್ದರಿಂದ ಸಾಕಷ್ಟು ಮಕ್ಕಳಿಗೆ ಕಿವಿ ಕೇಳಿಸುವಂತಾಗಿದೆ. ಕಿಮೋಥೆರಪಿ ಕೇಂದ್ರ, ಲಿಂಬ್‌ಸೆಂಟರ್, ಡಯಾಲಿಸಿಸ್ ಸೆಂಟರ್‌ಗಳನ್ನು ನನ್ನ ಅವಧಿಯಲ್ಲಿಯೇ ಆರಂಭಿಸಲಾಯಿತು. ಈ ಮೂಲಕ ಸಮಾಜಕ್ಕೆ ಸಹಾಯಕವಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಈ ಎಲ್ಲವೂ ಜನರಿಗೆ ದೊರೆಯುವಂತಾಗಬೇಕು. ಕೆಎಂಸಿಆರ್‌ಐನಲ್ಲಿ ಹೆಚ್ಚಿನ ಸೇವೆ ದೊರೆಯುವಂತಾಗಬೇಕು. ಅಂದಾಗ ಬಡವರಿಗೆ ಅನುಕೂಲವಾಗುತ್ತದೆ. ಈ ಶಾಲೆಗೆ ಹೊಸ ವೈದ್ಯಕೀಯ ಯಂತ್ರೋಪಕರಣ ಬೇಕಾಗಿದ್ದರೆ ಪೂರೈಸುವುದಾಗಿ ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಾಮಾನ್ಯವಾಗಿ ಶಾಲೆ ಆರಂಭಿಸಿದಾಗ ವಿವಿಧ ಸಮಸ್ಯೆ ಎದುರಿಸುವುದನ್ನು ನಾವು ಕಾಣುತ್ತೇವೆ. ಈ ರೀತಿ ವಿಶೇಷಚೇತನ ಮಕ್ಕಳ ಶಾಲೆ ತೆರೆದಾಗ ಸಮಸ್ಯೆಗಳು ಎದುರಾಗುವುದು ಸರ್ವೇ ಸಾಮಾನ್ಯ. ಆದರೆ, ಆ ಎಲ್ಲ ಸಮಸ್ಯೆ ಎದುರಿಸಿ ಇಂದು ಪಿ.ವಿ. ದತ್ತಿ ರೋಟರಿ ಶಾಲೆ 50ನೇ ವರ್ಷಕ್ಕೆ ಮುನ್ನಡೆಯುತ್ತಿದೆ. ಶಾಲೆ ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿಯಲ್ಲಿ ಇಪ್ಪತ್ತು ಲಕ್ಷ ರೂ. ಅನುದಾನ ಕೊಡುವುದಾಗಿ ಭರವಸೆ ನೀಡಿದರು.
ಸಂಸ್ಥೆ ಅಧ್ಯಕ್ಷ ಡಾ.ಪಿ.ವಿ. ದತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ಪ್ರೊ.ಸಿ.ಸಿ. ದೀಕ್ಷಿತ, ಕಾರ್ಯದರ್ಶಿ ಸುಹಾಸ ಜವಳಿ, ಪ್ರಮುಖರಾದ ಶೇಷಗಿರಿ ಕುಲಕರ್ಣಿ, ಡಾ.ಎಸ್.ಎಸ್. ಹಿರೇಮಠ, ಗಿರೀಶ ಉಪಾಧ್ಯಾ, ಮಹಾದೇವ ಕರಮರಿ, ರಿಯಾಜ್ ಬಸರಿ ಇತರರು ಇದ್ದರು.