ಮುದುಡಿದ ಮಳೆಯಾಶ್ರಿತ ಪೈರು

HNL bara
Published on

ಹಾನಗಲ್ಲ: ಮುಂಗಾರು ಹಂಗಾಮು ವಿಫಲವಾದಂತಾಗಿದೆ. ಕೊಳವೆ ಬಾವಿಗಳಿಂದ ನೀರು ಹರಿಸಿ ಒಂದಷ್ಟು ಬೆಳೆ ಉಳಿಸಿಕೊಳ್ಳಬೇಕೆಂಬ ಆಲೋಚನೆಯಲ್ಲಿದ್ದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗದೇ ಬೆಳೆ ಕೈಗೆ ಬಾರದಂಥ ಸ್ಥಿತಿ ಎದುರಾಗಿದೆ.

ತಾಲೂಕಿನಲ್ಲಿ ಒಟ್ಟು 14,350 ಹೆಕ್ಟೇರ್ ಭತ್ತ, 24,102 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ, 2400 ಹೆಕ್ಟೇರ್ ಸೋಯಾಅವರೆ, 2960 ಹೆಕ್ಟೇರ್ ಹತ್ತಿ ಹಾಗೂ ದ್ವಿದಳ ಧಾನ್ಯಗಳೂ ಸೇರಿದಂತೆ ತಾಲೂಕಿನಲ್ಲಿ ಒಟ್ಟು 47,350 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಮಳೆಯಾಶ್ರಿತ ಪೈರು ಬಹುತೇಕ ಕೈಕೊಟ್ಟಂತಾಗಿದೆ. ಇನ್ನುಳಿದವಲ್ಲಿ ನೀರಾವರಿ ಅನುಕೂಲವುಳ್ಳ ರೈತರು ವಿದ್ಯುತ್ ಇದ್ದಾಗ ನೀರು ಹಾಯಿಸಿ ಬೆಳೆ ಬದುಕಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಆದರೆ, ಹೆಸ್ಕಾಂ ಇದಕ್ಕೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಬೆಳೆ ವಿಮೆ ಕಂತು ಪಾವತಿಸಿದ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ. 25ರಷ್ಟು ಹಣ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ಕೃಷಿ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ವರದಿ ಸಲ್ಲಿಕೆಯಾದ ನಂತರವಷ್ಟೇ ಬರಗಾಲ ನಿರ್ವಹಣೆ ಕುರಿತಾದ ಪ್ರಕ್ರಿಯೆಗಳು ನಡೆಯಲಿವೆ. ಬರಗಾಲ ಪೀಡಿತ ತಾಲೂಕು ಎಂದು ಘೋಷಣೆಯಾಗದಿರುವ ಹಿನ್ನೆಲೆಯಲ್ಲಿ ತಹಸೀಲ್ದಾರರ ಖಾತೆಯಲ್ಲಿ ಹಣ ಬಂದಿಲ್ಲ. ಈ ಕುರಿತ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಜಿಲ್ಲಾಡಳಿತ ಹಣ ಬಿಡುಗಡೆಗೊಳಿಸಲಿದೆ.

ಸರ್ಕಾರ ನಿರ್ದೇಶನ ನೀಡಿದಂತೆ ಬೆಳೆಗಳ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿ ಇಲಾಖೆ ಕೈಗೊಳ್ಳಬಹುದಾದ ಪ್ರಕ್ರಿಯೆಗಳ ಕುರಿತು ಮಾರ್ಗದರ್ಶನ ನೀಡಿದ ನಂತರ ಅದರಂತೆ ಕೆಲಸ-ಕಾರ್ಯಗಳನ್ನು ಆರಂಭಿಸುತ್ತೇವೆ. ಬಿತ್ತನೆ ಕ್ಷೇತ್ರ, ಮಳೆ ಮಾಹಿತಿ, ಬೆಳೆಗಳ ಮಾಹಿತಿ ಸೇರಿದಂತೆ ಎಲ್ಲ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ. ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಿದರೆ ನಂತರ ಅದರ ಕಾರ್ಯಗಳು ಮುಂದುವರಿಯಲಿವೆ.I ಕೆ.ಮೋಹನಕುಮಾರ, ಸಹಾಯಕ ಕೃಷಿ ನಿರ್ದೇಶಕ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net