

ಶಿವಮೊಗ್ಗ: ಕಾಂಗ್ರೆಸ್ ಯಾವಾಗಲೂ ಒಂದು ಕೋಮನ್ನು ಓಲೈಕೆ ಮಾಡುತ್ತದೆ. ಅದರ ಫಲಿತಾಂಶವೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿರುವ ಗಲಭೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಹಬ್ಬ ಆಚರಿಸಲು ನೂರಾರು ಷರತ್ತು ಹಾಕುತ್ತಿದೆ. ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಸಾಗಿರುವುದು ಒಂದು ಮುಖ್ಯ ರಸ್ತೆಯಲ್ಲಿ. ಅಲ್ಲಿ ಅಹಿತಕರ ಘಟನೆ ನಡೆಯುವ ಸೂಚನೆ ಸಿಕ್ಕಾಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗ ಒಂದು ಸಣ್ಣ ಕಿಡಿ ಹೊತ್ತಿಕೊಂಡಿದ್ದು, ಹೀಗೆಯೇ ಬಿಟ್ಟರೆ ಇದು ಇಡೀ ರಾಜ್ಯಕ್ಕೆ ವ್ಯಾಪಿಸಿದರೂ ಆಶ್ಚರ್ಯವಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ಸುವ್ಯವಸ್ಥೆ ಸರಿಪಡಿಸಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.