

ವಿರಾಜಪೇಟೆ: ವಿರಾಜಪೇಟೆ ಬಿಟ್ಟಂಗಾಲ ಗ್ರಾಮದ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಇಬ್ಬರು ಕಾರ್ಮಿಕರ ನಡುವೆ ಗುರುವಾರ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.
ವಿರಾಜಪೇಟೆ ತಾಲೂಕು ಮಾಲ್ದಾರೆಯ ಜೇನುಕುರುಬರ ದಾಸ(50) ಕೊಲೆಯಾದವರು. ಕೊಲೆ ಮಾಡಿದ ಆರೋಪಿ ಮಂಜುನನ್ನು ಪೊಲೀಸರು ಬಂಧಿಸಿದ್ದಾರೆ.
ವಿರಾಜಪೇಟೆ ಬಿಟ್ಟಂಗಾಲ ಕಂಪನಿ ಮೊಟ್ಟೆಯ ಸಮೀಪವಿರುವ ನಾಯಡ ಅಪ್ಪಚ್ಚು ಅವರ ಲೈನ್‌ಮನೆಯಲ್ಲಿ ಇಬ್ಬರು ಕಾರ್ಮಿಕರು ಲೈನ್‌ಮನೆಯಲ್ಲಿ ಎರಡು ಪ್ರತ್ಯೇಕ ಮನೆಗಳಲ್ಲಿ ವಾಸವಿದ್ದರು. ಒಂದು ಭಾಗದಲ್ಲಿ ದಾಸ, ಮತ್ತೊಂದು ಮನೆಯಲ್ಲಿ ಮಂಜು, ಪತ್ನಿ ಹಾಗೂ ಮಕ್ಕಳು ಇದ್ದರು.
ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ಮಾಲೀಕರ ಕಾಫಿ ತೋಟಕ್ಕೆ ನಿತ್ಯ ಬಾಡಿಗೆ ವಾಹನ ಒಂದು ಇಬ್ಬರು ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಇಬ್ಬರ ನಡುವೆ ಆಗಾಗ್ಗೆ ಕಲಹ ನಡೆಯುತಿತ್ತು. ಗುರುವಾರ ಕಾಫಿ ತೋಟದ ಕೆಲಸ ಮುಗಿಸಿ ಬಂದ ಇಬ್ಬರು ಕಾರ್ಮಿಕರ ನಡುವೆ ಗಲಾಟೆ ಆರಂಭವಾಗಿದೆ.
ಮದ್ಯದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ದಾಸನ ತಲೆ ಭಾಗಕ್ಕೆ ಮಾರಕಾಸ್ತ್ರದಿಂದ ಮಂಜು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಪರಿಣಾಮ ದಾಸ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ಇಬ್ಬರನ್ನು ಕರೆದೊಯ್ಯಲು ಬಂದ ವಾಹನದ ಚಾಲಕ ಮನೆಗೆ ಆಗಮಿಸಿದ್ದಾನೆ. ದಾಸ ಮನೆ ಮುಂದಿರುವ ಅಂಗಳದಲ್ಲಿ ರಕ್ತಸಿಕ್ತವಾಗಿ ಮಲಗಿರುವುದು ಕಾಣಿಸಿದೆ. ತಕ್ಷಣವೇ ತೋಟದ ಮಾಲೀಕರು ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ, ವೃತ್ತ ನಿರೀಕ್ಷಕರು ಮತ್ತು ಗ್ರಾಮಾಂತರ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಕಾರ್ಮಿರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿರುವುದು ಮಂಜು ಎಂದು ತಿಳಿದು ಬಂದಿದೆ. ಬಿ.ಎ.ಮುತ್ತಪ್ಪ ನೀಡಿರುವ ದೂರು ಆಧರಿಸಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.