

ಮಡಿಕೇರಿ: ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ವಿಭಾಗದ ಸಿಬ್ಬಂದಿಗಳು ಗಲಭೆ ನಡೆದ ಸಂದರ್ಭ ಅದನ್ನು ಹೇಗೆ ನಿಯಂತ್ರಿಸಿ ಪರಿಸ್ಥಿತಿ ತಿಳಿಗೊಳಿಸಬಹುದು ಎಂದು ಅಭ್ಯಾಸ ನಡೆಸಿದರು.
ಈ ಸಂದರ್ಭ ತರಬೇತಿಯಲ್ಲಿರುವ ಪೊಲೀಸರು ಪ್ರತಿಭಟನಕಾರರಾಗಿ ಅಭಿನಯಿಸಿದರು. ಪೊಲೀಸ್ ಪಡೆ ಕ್ಲಿಷ್ಟಕರ ಪರಿಸ್ಥಿತಿ ಉಂಟಾದಲ್ಲಿ ಹಂತಹಂತವಾಗಿ ಮಾಡಬೇಕಾದ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ.ಮಲಚೀರ ಅಯ್ಯಪ್ಪ ಎದುರು ಪ್ರದರ್ಶಿಸಿದರು.
ಪ್ರಾತ್ಯಕ್ಷಿಕೆ ಹೀಗಿತ್ತು: ಮೊದಲು ಒಟ್ಟು ೩೬ ಪೊಲೀಸರ ತಂಡ ತಲಾ ೯ ಜನರ ೪ ಗುಂಪುಗಳಾಗಿ ರಚನೆಗೊಳ್ಳುತ್ತದೆ. ಮೇಲಾಧಿಕಾರಿಗಳ ಸೂಚನೆ ಮೇರೆ ಬರುವ ತಂಡಗಳು ಹಂತಹಂತವಾಗಿ ಪ್ರತಿಭಟನಾಕರರನ್ನು ಚದುರಿಸುವ ಯತ್ನ ಮಾಡಲು ಕಾರ್ಯಾರಂಭಿಸುತ್ತಾರೆ. ಕಾರ್ಯಾಚರಣೆಯ ಮೊದಲ ಭಾಗವಾಗಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿ ಟಿಯರ್ ಗ್ಯಾಸ್ ಹೊಗೆ ಸೃಷ್ಟಿಸಿ ಪ್ರತಿಭಟನಾಕರರನ್ನು ಚದುರಿಸುವ ಯತ್ನ ನಡೆಯಿತು. ಅದಕ್ಕೂ ಬಗ್ಗದ ಸಂದರ್ಭ ೩ ಸುತ್ತಿನ ಅಶ್ರುವಾಯು ಸಿಡಿಸಲಾಯಿತು. ಪರಿಸ್ಥಿತಿ ತಿಳಿಗೊಳ್ಳದೆ ಪೊಲೀಸರ ಮೇಲೆ ಉದ್ವಿಗ್ನರು ಕಲ್ಲು ತೂರಾಟ ಮಾಡಿ ದಾಳಿ ನಡೆಸಿದಾಗ ಸುರಕ್ಷ ಕವಚದೊಂದಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಕೊನೆಯ ಭಾಗವಾಗಿ ಗುಂಡಿನ ದಾಳಿ ನಡೆಸಲಾಯಿತು. ಈ ವೇಳೆ ಗಾಯಗೊಂಡ ವ್ಯಕ್ತಿಯನ್ನು ಪೊಲೀಸರೆ ಸ್ಟ್ರೆಚ್ಚರ್‌ನಲ್ಲಿ ಹೊತ್ತೊಯ್ದು ಚಿಕಿತ್ಸೆಗೆ ಸಾಗಿಸಿದರು.
ಪ್ರಾತ್ಯಕ್ಷಿಕೆಯಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚಿ ಶ್ಲಾಘಿಸಿದರು. ಗಲಭೆ ಸೃಷ್ಟಿಯಾದಲ್ಲಿ ಇದೇ ರೀತಿ ಕೆಲಸ ನಿರ್ವಹಿಸಬೇಕು. ಶಿಸ್ತುಬದ್ಧವಾಗಿ ನಡೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಪಣತೊಡಬೇಕೆಂದು ಕರೆ ನೀಡಿದ ಅವರು, ಕೊಡಗು ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆ ಪೊಲೀಸರು ಸೂಕ್ತ ತರಬೇತಿ ಹೊಂದಿರಲಿ ಎಂದು ಪ್ರಾತ್ಯಕ್ಷಿಕೆ ನಡೆಸಲಾಯಿತು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ತಿಳಿಸಿದರು.
ಪ್ರತಿ ಶುಕ್ರವಾರ ಪೊಲೀಸ್ ಪರೇಡ್ ನಡೆಯುತ್ತದೆ. ಅದೇ ರೀತಿ ತರಬೇತಿ ಅವಧಿಯಲ್ಲಿ ಗಲಭೆ ತಡೆ ಬಗ್ಗೆ ಪೊಲೀಸರು ಕಲಿತಿರುತ್ತಾರೆ. ಅದನ್ನು ಮರೆಯಬಾರದು ಎಂಬ ನಿಟ್ಟಿನಲ್ಲಿ ಅಭ್ಯಾಸ ನಡೆಸಲಾಗುತ್ತದೆ. ಸೂಕ್ತ ಸುರಕ್ಷಾ ಕವಚಗಳನ್ನು ನೀಡಲಾಗುತ್ತದೆ. ಕೋಮು ಸೂಕ್ಷ್ಮ ಜಿಲ್ಲೆಯಾಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪೊಲೀಸರು ಅಲರ್ಟ್ ಆಗಿರಬೇಕು ಎಂದರು.
ಈ ಸಂದರ್ಭ ಮಡಿಕೇರಿ ಡಿ.ವೈ.ಎಸ್.ಪಿ. ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕರುಗಳಾದ ಅನೂಪ್ ಮಾದಪ್ಪ, ಉಮೇಶ್, ಚನ್ನನಾಯಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.