ಶಾಸಕರ ವಿರುದ್ಧ ಚಿಕ್ಕಮಾರನಹಳ್ಳಿಯಲ್ಲಿ ಜನಾಕ್ರೋಶ

water problem
water problem
Published on

ಕುಡಿವ ನೀರಿಗೆ ಪರದಾಟ ಕೊಳವೆಬಾವಿಗೆ ಪಂಪ್-ಮೋಟಾರ್ ಸಂಪರ್ಕವಿಲ್ಲ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾರನಹಳ್ಳಿ ಗ್ರಾಮದಲ್ಲಿ ಮೂರ‌್ನಾಲ್ಕು ದಿನಗಳಿಂದ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಶಾಸಕ ಶ್ರೀನಿವಾಸ್ ಗಮನಹರಿಸುತ್ತಿಲ್ಲ ಎಂದು ಜನಾಕ್ರೋಶ ವ್ಯಕ್ತವಾಗಿದೆ. ಬಿಂದಿಗೆ ನೀರಿಗಾಗಿ ಮಹಿಳೆಯರು ದೂರದ ಪ್ರದೇಶಕ್ಕೆ ಹೋಗಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಬೇಸಿಗೆ ಮುನ್ನವೇ ಹಾಹಾಕಾರ: ಬೇಸಿಗೆ ಮುನ್ನವೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಸುಳ್ಳು ಭರವಸೆ ನೀಡುವ ಜನಪ್ರತಿನಿಧಿಗಳು ವಾಸ್ತವವಾಗಿ ಜನರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ. ಮೂಲಸೌಕರ್ಯ ಕಲ್ಪಿಸುವಲ್ಲಿ ಎಡವಿದ್ದಾರೆ ಎಂದು ಗ್ರಾಮದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಪ್-ಮೋಟಾರ್ ಇಲ್ಲ: ಎರಡು ತಿಂಗಳ ಹಿಂದೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆದಿದ್ದು, ಜನಪ್ರತಿನಿಧಿಗಳು ಮುತ್ತುವರ್ಜಿ ವಹಿಸಿ ಪಂಪು ಮೋಟಾರ್ ವ್ಯವಸ್ಥೆ ಮಾಡಿದ್ದರೆ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ ಎನ್ನಲಾಗಿದೆ.

ಬೋರ್‌ವೆಲ್ ಸಮಸ್ಯೆ: ಗ್ರಾಮದ ನಿವಾಸಿ ಪಾಲಯ್ಯ ಎಂಬವರ ಜಮೀನಿನಲ್ಲಿ 20ವರ್ಷದ ಹಿಂದೆ ಪಂಚಾಯಿತಿಯಿಂದ ಬೋರ್‌ವೆಲ್ ಕೊರೆಯಲಾಗಿದೆ. ಮೂರ‌್ನಾಲ್ಕು ದಿನಗಳಿಂದ ಬೋರ್‌ವೆಲ್ ಕೆಟ್ಟಿದೆ. ಜಮೀನು ಮಾಲೀಕ ಬೋರ್‌ವೆಲ್ ರೀಪೇರಿ ಮಾಡಲು ಅಡ್ಡಿಪಡಿಸುತ್ತಿದ್ದು ಸಾರ್ವಜನಿಕರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೋರ್‌ವೆಲ್ ರಿಪೇರಿಗೆ ಅನುವು ಮಾಡಿಕೊಟ್ಟಲ್ಲಿ ನೀರಿನ ಸಮಸ್ಯೆ ಬಗ್ಗೆ ಹರಿಯಲಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.


ತಾತ್ಕಾಲಿಕ ನೀರು ಪೂರೈಕೆ ಮಾಡುವ ಮುನ್ನ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಬೇಸಿಗೆ ಆರಂಭದಲ್ಲೇ ಇಂಥ ಪರಿಸ್ಥಿತಿ ಎದುರಾದರೆ ಮುಂದಿನ ದಿನಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

ಸಿ.ಎಚ್.ಸಿದ್ಧಯ್ಯ ಗ್ರಾಮಸ್ಥ

ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗ್ಗೆ ಹರಿಸುತ್ತಿಲ್ಲ. ಪಿಡಿಒಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ನೀರು ಗಂಟಿಯನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ಜತೆಗೆ ಸಮರ್ಪಕ ನೀರು ಪೂರೈಕೆ ಮಾಡುವಲ್ಲಿ ವಿಫಲರಾದ ನೀರುಗಂಟಿಯನ್ನು ವಜಾಗೊಳಿಸಬೇಕು

ಸಿ.ಅರುಣ್‌ಕುಮಾರ್, ಸ್ಥಳೀಯ

ಗ್ರಾಮದ ಕುಡಿಯುವ ನೀರಿನ ಬಗ್ಗೆ ಸಂಬಂಧಪಟ್ಟಂತೆ ಟ್ಯಾಂಕರ್ ಮೂಲಕ ತಾತ್ಕಾಲಿಕ ನೀರು ಪೂರೈಕೆ ಮಾಡಲಾಗಿದೆ. ಅಧಿಕಾರಿಗಳ ಗಮನಕ್ಕೆ ತಂದು ಹಳೇ ಬೋರ್‌ವೆಲ್ ಸಮಸ್ಯೆ ಬಗೆ ಹರಿಸಲಾಗುವುದು. ಜತೆಗೆ ನೂತನವಾಗಿ ಕೊರೆದ ಬೋರ್‌ವೆಲ್‌ಗೆ ಪಂಪುಮೋಟಾರ್ ಬಿಡುವ ಕಾರ್ಯ ಮಾಡಲಾಗುವುದು.
ಮಂಜುನಾಥಯ್ಯ, ಗ್ರಾಮಪಂಚಾಯಿತಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net