ರಿಂಗ್‌ರೋಡ್ ಕಾಮಗಾರಿ ಚುರುಕು

ringroad
Published on

ಕುಂದಾಪುರ: 18 ತಿಂಗಳಿನಿಂದ ನನೆಗುದಿಗೆ ಬಿದ್ದಿದ್ದ ಕುಂದಾಪುರದ ಮಹತ್ವಾಕಾಂಕ್ಷೆಯ ರಿಂಗ್‌ರೋಡ್ ಅಭಿವೃದ್ಧಿ ಕಾಮಗಾರಿ ಮತ್ತೆ ಚುರುಕು ಪಡೆದುಕೊಂಡಿದೆ.

ಅಭಿವೃದ್ಧಿ ಕಾಮಗಾರಿಗೆ 2023ರ ಜನವರಿಯಲ್ಲಿ ಚಾಲನೆ ದೊರಕಿದ ಬೆನ್ನಲ್ಲೇ ಸಿಆರ್‌ಜಡ್ ಕಾಯ್ದೆ ಉಲ್ಲಂಘನೆ ಉರುಳು ಸುತ್ತಿಕೊಂಡಿತ್ತು. ಸಮಸ್ಯೆ ನಿವಾರಣೆಗೆ ಪಿಡಬ್ಲುೃಡಿ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕ್ಲಿಯರೆನ್ಸ್ ಸಿಕ್ಕಿರಲಿಲ್ಲ. ಇದೀಗ ಯೋಜನೆಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ಕುಂದಾಪುರದ ಸಂಗಮ್ ಜಂಕ್ಷನ್ ತುದಿಯಿಂದ ಖಾರ್ವಿಕೇರಿ ತನಕ ಕಾಮಗಾರಿ ಆರಂಭಗೊಂಡಿದೆ.

ಮೊದಲ ಹಂತದಲ್ಲಿ 915 ಮೀಟರ್ ಹಾಗೂ 1110 ಮೀಟರ್‌ನಂತೆ ತಲಾ 9.98 ಕೋಟಿ ರೂ. ವೆಚ್ಚದಲ್ಲಿ 19.96 ಕೋಟಿ ರೂ. ಕಾಮಗಾರಿ ನಡೆಯಲಿದೆ. ರಸ್ತೆಯ ಎಡಬದಿಯಲ್ಲಿ 0.9 ಮೀಟರ್ ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ನಿರ್ಮಾಣ, 3 ಮೀಟರ್ ಅಗಲದ ಫುಟ್‌ಪಾತ್ ನಿರ್ಮಾಣವಾಗಲಿದ್ದು, ರಸ್ತೆ 7.5 ಮೀ ಅಗಲದಿಂದ ಕೂಡಿರುತ್ತದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಮಯಾವಕಾಶ ನೀಡಲಾಗಿದ್ದು, ಎರಡು ಗುತ್ತಿಗೆ ಕಂಪನಿ ಕಾಮಗಾರಿ ವಹಿಸಿಕೊಂಡಿದೆ.

ಸರ್ಕಾರ 2022ನೇ ಸಾಲಿನಲ್ಲಿ ರಿಂಗ್‌ರೋಡ್ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ಮಂಜೂರುಗೊಳಿಸಿತ್ತು. 2023ರ ಜನವರಿಯಲ್ಲಿ ಸಂಗಮ್ ಸೇತುವೆಯಿಂದ ಪ್ರಭಾಕರ ಟೈಲ್ಸ್ ತನಕ ಸುಮಾರು 4 ಕಿ.ಮೀ ಅಂತರದ ಕಾಮಗಾರಿ ಆರಂಭಿಸಲಾಗಿತ್ತು. ಈ ನಡುವೆ ಸಿಆರ್‌ಜೆಡ್ ಉರುಳು ಸುತ್ತಿಕೊಂಡಿದ್ದರಿಂದ ಕಾಮಗಾರಿ ನಿಂತುಹೋಗಿತ್ತು.

ಕಾನೂನು ಸಂಬಂಧಿತ ತೊಡಕು ನಿವಾರಣೆಯಾಗಿ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಸಂಗಮ್‌ನಿಂದ ಪ್ರಭಾಕರ ಟೈಲ್ಸ್ ತನಕ ರಿಂಗ್‌ರೋಡ್ ಸಮಗ್ರ ಅಭಿವೃದ್ಧಿ ನಡೆಯಲಿದೆ. -ಮೋಹನದಾಸ ಶೆಣೈ ಕುಂದಾಪುರ ಪುರಸಭೆ ಅಧ್ಯಕ್ಷ https://www.vijayavani.net/books-help-in-acquiring-knowledge https://www.vijayavani.net/there-is-no-religion-greater-than-humanity

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net