

ಮಂಗಳೂರು: ಕರ್ನಾಟಕದ ಪ್ರಥಮ ಬಿಜೆಪಿ ಸರ್ಕಾರದ ಮಹಾತ್ವಾಕಾಂಕ್ಷೆಯ ಮಂಗಳೂರಿನ ಮಂಗಳಾ ಕಾರ್ನಿಶ್ ವರ್ತುಲ ರಸ್ತೆ (ರಿಂಗ್ ರೋಡ್) ಯೋಜನೆ ಟೇಕಾಫ್ ಆಗಲೇ ಇಲ್ಲ.
ಯೋಜನೆ ಘೋಷಿಸಿ 10 ವರ್ಷವಾದರೂ ಕನಿಷ್ಠ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಕೂಡ ಸಾಧ್ಯವಾಗಿಲ್ಲ. ಈಗ ಅಧಿಕಾರಿಗಳು, ಕೆಲ ಜನಪ್ರತಿನಿಧಿಗಳು ಇದನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಳಪಡಿಸಲಾಗುತ್ತಿದೆ ಎನ್ನುತ್ತಿದ್ದಾರೆ. ವಾಸ್ತವ ವಾಗಿ ಸ್ಮಾರ್ಟ್ ಸಿಟಿಯಲ್ಲಿ ಪ್ರಸ್ತಾವಿತ ಮಂಗಳಾ ಕಾರ್ನಿಶ್ ಯೋಜನೆ ವ್ಯಾಪ್ತಿಯ ನದಿ ತೀರದ ಕೆಲ ಭಾಗಗಳನ್ನಷ್ಟೇ ಅಭಿವೃದ್ಧಿ ಪಡಿಸಲಾಗುತ್ತಿದೆ.
ಯೋಜನೆ ಸ್ವರೂಪ: ಗುಜರಾತ್‌ನಲ್ಲಿ ಯಶಸ್ವಿ ಮಾದರಿಯನ್ನು ಆಧರಿಸಿ ಮಂಗಳಾ ಕಾರ್ನಿಶ್ ಯೋಜನೆ ನದಿ ತೀರದ ಅಭಿವೃದ್ಧಿಯ ಮುಖ್ಯ ಪರಿಕಲ್ಪನೆ ಹೊಂದಿದೆ. ಹೊಸ ಟ್ರಾನ್ಸ್‌ಪೋರ್ಟ್ ಕಾರಿಡಾರ್, ರೆಸಾರ್ಟ್‌ಗಳ ನಿರ್ಮಾಣ, ಜಲ ಕ್ರೀಡಾ ಚಟುವಟಿಕೆ, ಐಟಿ ಹಬ್, ಪ್ರವಾಸೋದ್ಯಮ ಹಬ್, ಕಮರ್ಷಿಯಲ್ ಹಬ್ ಮುಂತಾದ ಕಾರ್ಯಕ್ರಮಗಳನ್ನು ಯೋಜನೆ ಒಳಗೊಂಡಿದೆ.
ನದಿ ತೀರದಲ್ಲಿ 100 ಮೀ. ಅಗಲದ (4ರಿಂದ 6ಲೈನ್ ತನಕ) 30 ಕಿ.ಮೀ. ಉದ್ದದ ರಸ್ತೆ. ರಾಷ್ಟ್ರೀಯ ಹೆದ್ದಾರಿ 66, 75 ಮತ್ತು 169 ಸಂಪರ್ಕ. ಎನ್‌ಎಂಪಿಟಿ-ವಿಮಾನ ನಿಲ್ದಾಣ ಸಂಪರ್ಕ, ತಣ್ಣೀರುಬಾವಿ-ಕೂಳೂರು ಸೇತುವೆ-ಪಿಲಿಕುಳ ಸಂಪರ್ಕ ಉಳ್ಳಾಲ ಸೇತುವೆ- ಕೂಳೂರು ಸೇತುವೆ ಸಂಪರ್ಕ, ಕೂಳೂರು ಸೇತುವೆ-ಮರವೂರು ಸೇತುವೆ, ಉಳ್ಳಾಲ ಸೇತುವೆ-ಕಣ್ಣೂರು (ಅಡ್ಯಾರ್), ಮರವೂರು ಸೇತುವೆ-ಗುರುಪುರ ಸೇತುವೆ ಸಂಪರ್ಕ ಯೋಜನೆಯಲ್ಲಿ ಸೇರಿದೆ.
ಗುಜರಾತ್ ಪ್ರವಾಸ, ಅಧ್ಯಯನ ವರದಿ
ಇದು ಮಾಜಿ ಶಾಸಕ ಎನ್.ಯೋಗೀಶ್ ಭಟ್ ಅವರ ಕನಸಿನ ಯೋಜನೆ. ಅವರ ಅವಧಿಯಲ್ಲೇ ಘೋಷಣೆಯಾಯಿತು. ಕರ್ನಾಟಕ ಹಾಗೂ ಮಂಗಳೂರಿನ ಉನ್ನತ ಅಧಿಕಾರಿಗಳು ಗುಜರಾತ್ ಪ್ರವಾಸ ಮಾಡಿ ಯೋಜನೆ ಸ್ವರೂಪದ ಅಧ್ಯಯನವನ್ನೂ ನಡೆಸಿದ್ದರು. 2011, ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಯೋಜನೆಯ ತಾಂತ್ರಿಕ ವಿಚಾರಗಳ ವಿನಿಮಯ ಸಂಬಂಧಿ ಸಭೆಯಲ್ಲಿ ಕರ್ನಾಟಕ ಕೈಗಾರಿಕೆ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರಾವಳಿ ಪ್ರಾಧಿಕಾರದ ಪ್ರತಿನಿಧಿಗಳು ಭಾಗವಹಿಸಿದ್ದರು. ಅಹ್ಮದಾಬಾದ್‌ನ ಸೆಂಟರ್ ಫಾರ್ ಎನ್ವಿರಾನ್‌ಮೆಂಟ್ ಪ್ಲಾನಿಂಗ್ ಆ್ಯಂಡ್ ಟೆಕ್ನಾಲಜಿ (ಸೆಪ್ಟ್) ವಿದ್ಯಾರ್ಥಿಗಳು ಕೂಡ ನಗರಕ್ಕೆ ಆಗಮಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರು. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ಮುಡಾ ಮೂಲಕ ಕೈಗೆತ್ತಿಕೊಳ್ಳುವ ಕೆಲಸ ಆರಂಭ ವಾಯಿತು. ಆದರೆ ಫಲ ನೀಡಲಿಲ್ಲ.
ಮುಂದಿನ ದಾರಿ? ಯೋಜನೆ ಅನುಷ್ಠಾನಗೊಳ್ಳಲು ನಿಗದಿತ ಪ್ರದೇಶ ವ್ಯಾಪ್ತಿಯಲ್ಲಿ ಜಮೀನು ಅವಶ್ಯ. ಆದರೆ, ಅಲ್ಲಿ ಅವಶ್ಯ ಸರ್ಕಾರಿ ಜಮೀನು ಇಲ್ಲ. ಅಂದರೆ ಖಾಸಗಿ ವ್ಯಕ್ತಿಗಳಿಂದ ಜಮೀನು ಖರೀದಿಸಿ, ಇತರ ಪರ್ಯಾಯ ಮಾರ್ಗ ಹುಡುಕಾಟ ನಡೆಸಬೇಕು. ಇದಕ್ಕಾಗಿ ಕರ್ನಾಟಕ ಟೌನ್ ಆ್ಯಂಡ್ ಕಂಟ್ರಿ ಪ್ಲಾನಿಂಗ್ ಆ್ಯಕ್ಟ್‌ನಲ್ಲಿ (ಕೆಟಿಸಿಪಿ)ಕೆಲ ತಿದ್ದುಪಡಿ ತಂದು ನಗರಾಭಿವೃದ್ಧಿ ಯೋಜನೆಯಲ್ಲಿ ಅವಕಾಶ ಸೃಷ್ಟಿಸಬೇಕು. ಬಳಿಕ ಸರ್ವೇ ಆಗಬೇಕು ಎನ್ನುತ್ತಾರೆ ಯೋಜನೆಯ ತಾಂತ್ರಿಕ ಸಲಹೆಗಾರರಾಗಿದ್ದ ಇಂಜಿನಿಯರ್ ಧರ್ಮರಾಜ್.
ಸರ್ಕಾರದ ನಿರಂತರ ಪ್ರಯತ್ನದ ಹೊರತಾಗಿಯೂ ಮಂಗಳಾ ಕಾರ್ನಿಶ್ ಯೋಜನೆ ಪ್ರಗತಿ ಕಂಡಿಲ್ಲ. ಸ್ಮಾರ್ಟ್ ಸಿಟಿಯಲ್ಲಿ ಈ ಯೋಜನೆ ರೂಪಿಸುವುದು ಕಷ್ಟ. ನಗರಾಭಿವೃದ್ಧಿ ಇಲಾಖೆ ಈ ವಿಷಯದಲ್ಲಿ ಮಹತ್ವದ ಪಾತ್ರ ವಹಿಸಬೇಕು. ಧರ್ಮರಾಜ್, ಯೋಜನೆಯ ತಾಂತ್ರಿಕ ಸಲಹೆಗಾರ ಮಂಗಳಾ ಕಾರ್ನಿಶ್ ಯೋಜನೆ ಅನುಷ್ಠಾನವಾದರೆ, ಮಂಗಳೂರು ನಗರದ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ನಗರದ ಹೊರ ಭಾಗದಲ್ಲೇ ಸಂಚರಿಸುವ ವಾಹನಗಳು ನಗರದ ಒಳಗೆ ಪ್ರವೇಶಿಸುವ ಅಗತ್ಯ ಇರುವುದಿಲ್ಲ. ಮೂರು ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣ, ನವಮಂಗಳೂರು ಬಂದರು ಸಂಪರ್ಕ ದೊರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆ ಅನುಷ್ಠಾನಕ್ಕೆ ಪ್ರಶಸ್ತ ಸಮಯ. ಎನ್.ಯೋಗೀಶ್ ಭಟ್, ಮಾಜಿ ಶಾಸಕ