ಕಾರವಾರದಲ್ಲಿ ವಿಶೇಷ ಸೌಹಾರ್ದತೆ

Harmony ganapa
Published on

ಕಾರವಾರ: ಗಣೇಶೋತ್ಸವ ಮೆರವಣಿಗೆಯ ವೇಳೆ ಮುಸ್ಲಿಂ ಮತೀಯರು ಸಿಹಿ, ಪಾನಕ ಹಂಚಿದರು. ಮೆರವಣಿಗೆಯಲ್ಲಿ ಪಾಲ್ಗೊಂಡರು. ಈದ್ ಮಿಲಾದ್ ವೇಳೆ ಹಿಂದುಗಳೂ ಮುಸ್ಲಿಂ ಜತೆ ಪಾಲ್ಗೊಂಡು ಸಂಭ್ರಮ ಹಂಚಿಕೊಂಡರು. ಇದು ಕಾರವಾರದ ಕೋಣೆವಾಡದ ವಿಶೇಷ.
ಹಿಂದು ಮುಸ್ಲಿಂ ಮತೀಯರು ಒಟ್ಟಾಗಿ ಜೀವಿಸುವ ಈ ಪ್ರದೇಶದಲ್ಲಿ ವಿಶೇಷ ಸೌಹಾರ್ದತೆ ಇದೆ. ಜಾಮಿಯಾ ಮಸೀದಿಯ ಎದುರೇ ಗಜಾನನೋತ್ಸವ ಸಮಿತಿ ಇದ್ದು, ಅಲ್ಲಿ 9 ದಿನ ಗಣಪತಿ ಕೂಡ್ರಿಸಲಾಗುತ್ತದೆ. ಇನ್ನೂ ವಿಶೇಷ ಎಂದರೆ ಇಲ್ಲಿನ ಗಣೇಶೋತ್ಸವ ಸಮಿತಿಗೆ ಮುಸ್ಲೀಂ ಸಮುದಾಯದ ನಜೀರ್ ರಾಣಿಬೆನ್ನೂರು ಅಧ್ಯಕ್ಷರು. ಬಾಬು ಶೇಖ್ ಸಂಚಾಲಕರು. ಕಳೆದ 24 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಬಾಬು ಶೇಖ್ ಅದರ ನೇತೃತ್ವ ವಹಿಸುತ್ತಾರೆ. ಈದ್ ಮಿಲಾದ್ ಆಚರಣೆ ಸಮಿತಿಗೆ ನಾಗರಾಜ ಬಾಬನಿ ಅಧ್ಯಕ್ಷರಾಗಿದ್ದಾರೆ. ಭಾನುವಾರ ಕೋಣೆವಾಡದಲ್ಲಿ ಪ್ರತಿಷ್ಠಾಪಿತ ಗಣಪನ ಮೂರ್ತಿ ವಿಸರ್ಜಿಸಲಾಯಿತು. ಅದರಲ್ಲಿ ಮುಸ್ಲೀಂ ಸಮುದಾಯದ ಸಾಕಷ್ಟು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೂರ್ತಿಯ ಅಲಂಕಾರ, ಹೊರ ತರುವುದು ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿದರು. ಸೋಮವಾರ ಈದ್ ಮೆರವಣಿಗೆಯಲ್ಲಿ ಹಿಂದುಗಳು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net