

ಮೈಸೂರು: ಒಳ ಮೀಸಲಾತಿ ಅನುಷ್ಠಾನದಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಲಯದಲ್ಲಿ ಮಧ್ಯಂದತರ ಅರ್ಜಿ ಸಲ್ಲಿಸಲು ದುಂಡು ಮೇಜಿನ ಸಭೆಯಲ್ಲಿ ನಿರ್ಣಯಿಸಲಾಯಿತು.
ಕರ್ನಾಟಕ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ಜೈ ಭೀಮ್ ಸಾಮಾಜಿಕ ಪರಿವರ್ತನಾ ವೇದಿಕೆಯಿಂದ ನಗರದ ಲೋಕೋಪಯೋಗಿ ಅತಿಥಿಗೃಹದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳ ಮೀಸಲಾತಿ ಒಂದು ಕುತಂತ್ರ ಮತ್ತು ಬಲಗೈ ಸಮುದಾಯದ ಸಾಂವಿಧಾನಿಕ ಹಕ್ಕು ಭಾಧ್ಯತೆಗಳ ರಕ್ಷಣೆ’ ಕುರಿತ ದುಂಡುಮೇಜಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಾಯಿತು.
ಜಾತಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿದೆ. ಧರ್ಮ, ಧರ್ಮಗಳ ನಡುವೆ ದ್ವೇಷ ಭಿತ್ತಿದವರು ಈಗ ಜಾತಿ, ಜಾತಿಗಳ ಮಧ್ಯೆ ಒಡಕು ಉಂಟು ಮಾಡಲು ಷಡ್ಯಂತ್ರ ರೂಪಿಸಿವೆ ಎಂದು ಸಭೆ ಆರೋಪಿಸಿತು.
ರಾಜಕೀಯ ಲಾಭಕ್ಕಾಗಿ ರಾಮಮಂದಿರವನ್ನು 50 ವರ್ಷಗಳ ಕಾಲ ಜೀವಂತವಾಗಿಟ್ಟಿದ್ದವರು ಈಗ ಜಾತಿಗಳನ್ನು ಛಿದ್ರಮಾಡಲು ಮುಂದಾಗಿವೆ. ಇದರ ಭಾಗವಾಗಿ ಒಳ ಮೀಸಲಾತಿಯನ್ನು ತಾರತಮ್ಯ ಮಾಡಿ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಸಭೆಯಲ್ಲಿ 9 ನಿರ್ಣಯ ಮಂಡಿಸಿ, ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯವನ್ನು ಪ್ರವರ್ಗ ‘ಬಿ’ಗೆ ಸೇರಿಸಲಾಗಿದೆ. ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಸಮುದಾಯ ಅವಕಾಶ ವಂಚಿತವಾಗಲಿದೆ. ಹೀಗಾಗಿ ಒಳ ಮೀಸಲಾತಿ ಅನುಷ್ಠಾನದಲ್ಲಿ ಸಮುದಾಯಕ್ಕಾಗಿರುವ ಅನ್ಯಾಯವನ್ನು ಹೈಕೋರ್ಟ್‌ನಲ್ಲಿ ಮಧ್ಯಂದರ ದಾವೆ ಹೂಡಲಾಗುವುದು ಎಂದು ಹೇಳಿದರು.
ದಲಿತ ಸಮುದಾಯಗಳ ಕುರಿತು ಆಳ ಅಧ್ಯಯನ ನಡೆಸಿದ ಸರ್ಕಾರಕ್ಕೆ ಸಲ್ಲಿಸಿರುವ ನಾಗಮೋಹನ ದಾಸ್ ವರದಿಯಲ್ಲಿರುವ ಲೋಪದೋಷಗಳ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದು. ಜತೆಗೆ ಈ ವರದಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ನೌಕರರ ಪಟ್ಟಿಯಲ್ಲಿ ವರದಿ ಇಲ್ಲವಾಗಿರುವು ಏಕೆ ಎಂದು ಪ್ರಶ್ನಿಸಿದರು.
2026-27ನೇ ಸಾಲಿನಲ್ಲಿ ನಡೆಯುವ ಜಾತಿಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯ ಒಳ ಪಂಗಡಗಳನ್ನು ಬರೆಸದೆ ಒಂದೇ ಜಾತಿ ಸೂಚಕ ಪದ ಬಳಸುವಂತೆ ಜಾಗೃತಿ ಮೂಡಿಸಲಾಗುವುದು. ಜನಸಂಖ್ಯೆ ಆಧಾರದ ಮೇಲೆ ನಿಗಮ-ಮಂಡಳಿಗಳಿಗೆ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಹಿಂದುಳಿದ ವರ್ಗದ ಶಾಶ್ವತ ಆಯೋಗವು ನಡೆಸುವ ಸಾಮಾಜಿಕ ಮತ್ತು ಸಮೀಕ್ಷೆಯ ಬಲಗೈ ಸಮುದಾಗಳ ಸಮೀಕ್ಷೆ ನಡೆಸಲು ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ರಾಜ್ಯ ಸಮಿತಿ ರಚಿಸಿ ರಾಜ್ಯಾದ್ಯಂತ ಕಾರ್ಯೋನ್ಮುಖವಾಗಬೇಕು. ಬೆಂಗಳೂರು ನಗರ ಜಿಲ್ಲೆ ಹಾಗೂ ಮಹಾನಗರ ಪಾಲಿಕೆ ಇರುವ ಪ್ರದೇಶದಲ್ಲಿ ಸಮರ್ಪಕ ಸಮೀಕ್ಷೆ ನಡೆಸಲು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಅವರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.
ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು 101 ಪರಿಶಿಷ್ಟ ಜಾತಿಯಿಂದ ಸಂವಿಧಾನದ ಅನುಚ್ಛೇದ 341(2)ರ ಅಡಿಯಲ್ಲಿ ಕೈ ಬಿಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು, 3 ಜಾತಿಗಳನ್ನು ಕೈ ಬಿಟ್ಟು ನಂತರ 98 ಜಾತಿಗಣತಿಯಲ್ಲಿ 2026-27ರಲ್ಲಿ ನಡೆಯುವ ಜನಗಣತಿ ಮತ್ತು ಜಾತಿಗಣತಿಯಲ್ಲಿ ನಿಖರವಾದ ಮಾಹಿತಿ ದಾಖಲಿಸಲು ಕೋರಲು ಸಭೆ ನಿರ್ಧರಿಸಿತು.
ಮುಖಂಡ ಸೂರ್ಯದೇವ್ ಮಾತನಾಡಿ, ಪರಿಶಿಷ್ಟ ಜಾತಿಗೆ ಕಲ್ಪಿಸಿರುವ ಮೀಸಲಾತಿ ಕಸಿದುಕೊಳ್ಳುವ ಹುನ್ನಾರದಿಂದ ಆರ್‌ಎಸ್‌ಎಸ್ ಹುನ್ನಾರ ನಡೆಸಿ ಅದರ ಮುಖ್ಯಸ್ಥರು ಈ ಹಿಂದೆ ಮಾದಾರ ಚೆನ್ನಯ್ಯ ಮಠಕ್ಕೆ ಭೇಟಿ ನೀಡಿ ನಾಲ್ಕು ದಿನ ವಾಸ್ತವ್ಯ ಹೂಡಿದ್ದರು ಎಂದು ದೂರಿದರು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ದಾಸಯ್ಯ ಮಾತನಾಡಿ, ಗುಲಾಮಗಿರಿಯಿಂದ ಹೊರ ಬರಲು ಮುಂದಾಗಿರುವ ಸಮುದಾಯವನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಸಂಚು ನಡೆಯುತ್ತಿದೆ. ಇದರ ಕುರಿತು ಜಾಗೃತಿ ಮೂಡಿಸುವ ಕಾರ್ಯ ಅಗಬೇಕು. ಆಗಾಗಿ ವರದಿಯನ್ನು ಜನರಿಗೆ ತಿಳಿಸಿ ಮುನ್ನಡೆಯಬೇಕು ಎಂದು ಹೇಳಿದರು.
ಲೇಖಕ ಮಹೇಶ್ ಇರಸವಾಡಿ, ಒಳಮೀಸಲಾತಿ ಜಾಗೃತಿ ವೇದಿಕೆಯ ಸಂಚಾಲಕ ನವೀನ್ ಮನಿಯ, ಲೇಖಕ ಸಿ.ಹರಕುಮಾರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್ ಐಜೂರು, ದಲಿತ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಹರಿಹರ ಆನಂದಸ್ವಾಮಿ, ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಮಾಜಿ ಉಪಾಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಕಾರ್ಯದರ್ಶಿ ಉಮೇಶ್, ಡಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಆರ್.ಕಾಂತರಾಜು, ನೆಲೆ ಹಿನ್ನೆಲೆ ಗೋಪಾಲ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಪುಟ್ಟರಸ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾರಾಜ್, ನಗರಪಾಲಿಕೆ ಮಾಜಿ ಸದಸ್ಯರಾದ ಸಿದ್ದಪ್ಪ, ಡಾ.ಅಶ್ವಿನಿ ಶರತ್, ಪಲ್ಲವಿ ಬೇಗಂ, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಶರತ್, ಮುಖಂಡರಾದ ಈಶ್ವರ್‌ಚಕ್ಕಡಿ, ಪ್ರದೀಪ್‌ಚಂದ್ರು, ಸುರೇಶ್‌ಬಾಬು, ಮಧುಸೂದನ್, ಮಹದೇವ್, ಗಂಗಾಧರಯ್ಯ, ಹಿರಿಯ ವಕೀಲ ಮಹದೇವಯ್ಯ, ಕೆಂಪದೇವಯ್ಯ ಇತರರು ಇದ್ದರು.