

ಮಡಿಕೇರಿ:
ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ವಾಹನ ಓಡಿಸಲು ಅಸಾಧ್ಯವಾದ ಸ್ಥಿತಿ ಇದೆ. ಕೆಲವು ಭಾಗಗಳಲ್ಲಿ ದುರಸ್ತಿಗೆಂದು ಹಳೆಯ ಡಾಂಬರು ಕಿತ್ತುಹಾಕಲಾಗಿದ್ದು, ಹೊಸ ಕಾಮಗಾರಿ ಇನ್ನೂ ಶುರು ಮಾಡಿಲ್ಲ. ಕಳೆದ ವ?ರ್ ಮಳೆಯ ಕಾರಣ ಕೊಟ್ಟು ರಸ್ತೆ ಕೆಲಸ ನಡೆಸಿರಲಿಲ್ಲ. ಈ ಬಾರಿ ಮಳೆ ಕಳೆದ ವರ್ಷದಷ್ಟು ಇಲ್ಲದಿದ್ದರೂ ಮತ್ತದೇ ಸ್ಥಿತಿ ಕಂಡುಬರುತ್ತಿದೆ. ಅದರಲ್ಲೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಸಾಮಾನ್ಯವಾಗಿದೆ.
೬-೭ ತಿಂಗಳು ಮಳೆಗಾಲವನ್ನು ಹೊಂದಿರುವ ಕೊಡಗಿನಲ್ಲಿ ಇದೇ ಕಾರಣಕ್ಕೆ ರಸ್ತೆಗಳು ಹಾಳಾಗುತ್ತಿರುತ್ತದೆ. ಆದರೆ ಗುಣಮಟ್ಟದ ಕಾಮಗಾರಿ ನಡೆದರೆ ದಶಕಗಳ ಕಾಲ ಬಾಳಿಕೆ ಬಂದಿರುವುದಕ್ಕೆ ಸಾಕ್ಷಿಗಳೂ ಇದೆ. ಕುಶಾಲನಗರ - ಸಿದ್ದಾಪುರ ನಡುವಿನ ರಸ್ತೆ ಹಲವೆಡೆಗಳಲ್ಲಿ ಸಂಪೂರ್ಣ ಹದಗೆಟ್ಟಿದೆ. ನೆಲ್ಯಹುದಿಕೇರಿ ಭಾಗದಲ್ಲಿ ಗುಂಡಿಗಳಿಂದ ಕೂಡಿರುವ ರಸ್ತೆಗಳ ಸಾಮ್ರಾಜ್ಯವೇ ಕಂಡುಬರುತ್ತದೆ.
ಅರೆಕಾಡು - ಹೊಸ್ಕೇರಿ ರಸ್ತೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ರಸ್ತೆ ಅಭಿವೃದ್ಧಿಗಾಗಿ ಮೊದಲಿದ್ದ ರಸ್ತೆಯನ್ನು ಕಿತ್ತುಹಾಕಲಾಗಿದ್ದು, ಹೊಸದಾಗಿ ಇನ್ನೂ ಕಾಮಗಾರಿ ಶುರುವಾಗಿಲ್ಲ. ಹೊಂಡ ಗುಂಡಿಗಳಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನ ಸಂಚಾರವಿರಲಿ, ಪಾದಾಚಾರಿಗಳ ಓಡಾಟವೂ ಅಸಾಧ್ಯವಾಗಿದೆ. ಬೈಕ್ ಸವಾರರು ಬಿದ್ದು ಗಾಯಗೊಳ್ಳುವುದು ಇಲ್ಲಿ ಸಾಮಾನ್ಯವಾಗಿದೆ.
ನಾಪೋಕ್ಲು ವಿರಾಜಪೇಟೆ, ನಾಪೋಕ್ಲು-ಮೂರ್ನಾಡು ರಸ್ತೆಯ ಹಲವೆಡೆ ಸಂಪೂರ್ಣ ಹಾಳಾಗಿದೆ. ವಾಹನಗಳು ಒಂದು ಗುಂಡಿ ತಪ್ಪಿಸಿ ಸಂಚರಿಸಲು ನೋಡಿದರೆ ಮತ್ತೊಂದು ಗುಂಡಿಯೊಳಗೆ ಬಿದ್ದಿರುತ್ತದೆ. ಕಕ್ಕಬ್ಬೆ ವ್ಯಾಪ್ತಿಯಲ್ಲೂ ಇದೇ ಸ್ಥಿತಿ ಇದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಸ್ಥಿತಿಯೂ ಹೀಗೆಯೇ ಇದೆ. ತುಲಾ ಸಂಕ್ರಮಣ ಜಾತ್ರೆ ಸಂದರ್ಭದಲ್ಲಿ ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ತೇಪೆ ಹಚ್ಚುವ ಕೆಲಸ ನಡೆದಿದೆ. ಆದರೆ ಮತ್ತೆ ಸುರಿದ ಮಳೆಗೆ ಎಲ್ಲವೂ ಕಿತ್ತು ಬರುತ್ತಿದೆ.
ಉತ್ತಮ ರಸ್ತೆ, ಗುಣಮಟ್ಟದ ವಿದ್ಯುತ್…ಇವೆರಡು ಕೊಡಗಿನ ಜನರ ಸಾಮಾನ್ಯ ಬೇಡಿಕೆಗಳು. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಲಿ ಎನ್ನುವುದು ಸ್ಥಳೀಯರ ಒತ್ತಾಸೆ. ಈ ಕುರಿತು ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ಮೊದಲು ಗ್ರಾಮೀಣ ರಸ್ತೆಗಳನ್ನು ಸರಿಪಡಿಸಬೇಕು. ಗ್ರಾಮದೊಳಗಿನ ರಸ್ತೆ ಗುಂಡಿಮಯವಾಗಿರುವುದರಿಂದ ಶಾಲಾ ವಾಹನಗಳು ಗ್ರಾಮದೊಳಗೆ ಬರುತ್ತಿಲ್ಲ. ಮುಖ್ಯ ರಸ್ತೆಗೆ ಕಾಲ್ನಡಿಗೆಯಲ್ಲೇ ತೆರಳಬೇಕು. ಯಡೂರು ಗ್ರಾಮದೊಳಗಿನ ರಸ್ತೆಗಳು ಹಾಳಾಗಿವೆ. ರಸ್ತೆ ಸರಿ ಪಡಿಸಿ ಸರ್ಕಾರ ಗ್ರಾಮೀಣ ರಸ್ತೆಗಳಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಿದರೆ ಒಂದಷ್ಟು ರಸ್ತೆಗಳನ್ನು ಸರಿಪಡಿಸಬಹುದು.
ವೈ.ಎಸ್. ಧನ್ಯಾ, ವಿದ್ಯಾರ್ಥಿನಿ, ಯಡೂರು ಗ್ರಾಮ
ಸ್ವಾತಂತ್ರ್ಯ ಬಂದು ೭೬ ವರ್ಷಗಳು ಕಳೆದರೂ ಮಲ್ಲಳ್ಳಿ ಗ್ರಾಮಕ್ಕೆ ರಸ್ತೆಯಾಗಿಲ್ಲ. ಇದು ಅತೀ ಹೆಚ್ಚು ಮಳೆ ಬೀಳುವ ಗ್ರಾಮ. ಕೃಷಿ ಉತ್ಪನ್ನಗಳನ್ನು ತಲೆ ಹೊರೆಯಲ್ಲೆ ಹೊರಬೇಕು. ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳಿಗೆ ರಸ್ತೆ ಡಾಂಬರೀಕರಣಗೊಂಡಿಲ್ಲ. ನಾವು ತೆರಿಗೆ ಕಟ್ಟುತ್ತೇವೆ. ಹೈವೇಗಳಿಗೆ ಸಾವಿರಾರು ಕೋಟಿ ರೂ. ಚೆಲ್ಲುತ್ತಿದ್ದಾರೆ. ಗ್ರಾಮೀಣ ರಸ್ತೆಗೆ ಮಾತ್ರ ಅನುದಾನವಿಲ್ಲ.
ವೆಂಕಟೇಶ್, ಕೃಷಿಕ, ಮಲ್ಲಳ್ಳಿ ಗ್ರಾಮ
ನೆಲ್ಲಿಹುದಿಕೇರಿ-ಅತ್ತಿಮಂಗಲ ಮಾರ್ಗದ ಅರೆಕಾಡು, ಮರಗೋಡು ಮೂಲಕ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ೧೫ ವ?ರ್ಗಳಿಂದ ಡಾಂಬರು ಕಾಣದೆ ಹೊಂಡ-ಗುಂಡಿಗಳಿಂದ ಕೂಡಿದೆ. ಈ ರಸ್ತೆ ಮಧ್ಯೆಯೇ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ನಿತ್ಯ ಸಂಚರಿಸಬೇಕಾಗಿದೆ. ವಾಹನ ಸವಾರರು ಪ್ರಯಾಣಕ್ಕೆ ಪ್ರಯಾಸ ಪಡಬೇಕಾಗಿದೆ. ಲೋಕೋಪಯೋಗಿ ಇಲಾಖೆ ಇತ್ತೀಚೆಗೆ ಗುಂಡಿ ಮುಚ್ಚುವ ನೆಪದಲ್ಲಿ ಗುಂಡಿಗಳಿಗೆ ಮಣ್ಣು ಸುರಿದು ತೆರಳಿತ್ತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಇನ್ನ?್ಟು ಗುಂಡಿಗಳು ಉದ್ಭವವಾಗಿವೆ.
ಸುನೀಲ್ ಚೇರಂಡ, ಹೋಸ್ಕೆರಿ ನಿವಾಸಿ
ಸಿದ್ದಾಪುರ - ಕುಶಾಲನಗರ ಮುಖ್ಯರಸ್ತೆಯಲ್ಲಿ ಬಹುಭಾಗ ಗುಂಡಿಗಳೇ ಇದ್ದು, ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೊಣನೂರು - ಮಾಕುಟ್ಟ ರಾಜ್ಯ ಹೆದ್ದಾರಿಗೆ ಒಳಪಡುವ ಈ ರಸ್ತೆಯ ವಾಲ್ಲೂರು, ರಂಗಸಮುದ್ರ, ತ್ಯಾಗತ್ತೂರು ಹಾಗೂ ಒಂಟಿಯಂಗಡಿ ವ್ಯಾಪ್ತಿಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ಹಲವು ವ?ರ್ಗಳಿಂದ ಡಾಂಬರನ್ನೇ ಕಂಡಿಲ್ಲ, ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ದುಬಾರೆ ಕೂಡ ಇದೇ ರಸ್ತೆಯ ಸಮೀಪದಲ್ಲೇ ಇದೆ. ಹೀಗಿದ್ದರೂ, ರಸ್ತೆಯ ಅಭಿವೃದ್ಧಿ ಕಡೆಗೆ ಯಾರೊಬ್ಬರೂ ಗಮನ ಹರಿಸಿಲ್ಲ.
ಶಿಹಾಬುದ್ದಿನ್ ನೆಲ್ಯಹುದಿಕೇರಿ
ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ವಾಹನ ಓಡಿಸಲು ಅಸಾಧ್ಯವಾದ ಸ್ಥಿತಿ ಇದೆ. ಮೂಲಭೂತವಾದ ಸೌಲಭ್ಯ ನೀಡುವಲ್ಲಿ ಇಂದಿನ ಸರ್ಕಾರ ವಿಪಲವಾಗಿದೆ, ಇದೇ ಸರ್ಕಾರ ಮುಂದುವರೆದರೆ ಉತ್ತಮ ರಸ್ತೆಯನ್ನು ನಾವು ಚಿತ್ರಗಳಲ್ಲಿ ಮಾತ್ರ ನೋಡ ಬೇಕಾಗುತ್ತದೆ.
ಅನಂತ್ ಕುಮಾರ್ ಬಿ.ಎಸ್., ತಾಲೂಕು ಪಂಚಾಯತಿ ಮಾಜಿ ಸದಸ್ಯ, ಶನಿವಾರಸಂತೆ
ಒಂದು ಊರು ಅಭಿವೃದ್ಧಿ ಹೊಂದಬೇಕಾದರೆ ಮೂಲಭೂತ ಸೌಕರ್ಯಗಳು ಸರಿಯಾಗಿ ಇರಬೇಕು. ಅದರಲ್ಲೂ ಊರಿಗೆ ಉತ್ತಮ ರಸ್ತೆ ಇದ್ದರೆ ಆ ಊರು ಅಭಿವೃದ್ಧಿ ಆಗುತ್ತದೆ. ಆದರೆ ಕೊಡಗಿನಲ್ಲಿ ಹೆಚ್ಚಿನ ರಸ್ತೆಗಳು ಹದಗೆಟ್ಟಿದೆ. ನಾನಾ ಕಾರಣಗಳಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಈಗ ಮಳೆ ನಿಂತಿದ್ದು ಕಾಮಗಾರಿ ಆರಂಭಿಸಲು ಉತ್ತಮ ಸಮಯ. ಸಂಬಂಧಿಸಿದವರು ಆದ?್ಟು ಬೇಗ ಕಾಮಗಾರಿ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ.
ಬಿ.ಎಸ್. ಚಂದ್ರಶೇಖರ್ (ರಾಜ), ಗೋಣಿಕೊಪ್ಪ
ಭಾರಿ ಮಳೆಯಿಂದಾಗಿ ಕೊಡಗಿನ ಬಹುತೇಕ ರಸ್ತೆಗಳು ತುಂಬಾ ಹದಗೆಟ್ಟಿದೆ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ನಮ್ಮ ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಿ ಆದಷ್ಟು ಶೀಘ್ರ ರಸ್ತೆಗಳನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು.
ಪ್ರತೀಪ ಬಿ. ಎಂ., ಗ್ರಾಮ ಪಂಚಾಯಿತಿ ಸದಸ್ಯ, ನಾಪೋಕ್ಲು
ಹಾಕತ್ತೂರು-ಅಭ್ಯತ್ ಮಂಗಲ ರಸ್ತೆ ಅಭಿವೃದ್ಧಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಕಾಮಗಾರಿ ನಡೆಸಲು ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದ?್ಟು ಬೇಗ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗುವುದು
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲದಲ್ಲಿ ಜಾತ್ರೆ ಸಮಯದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ನಡೆದಿತ್ತು. ಆದರೆ ನಂತರ ಬಂದ ಮಳೆಯಿಂದ ಮತ್ತೆ ಹಾಳಾಗಿದೆ. ಈ ವ್ಯಾಪ್ತಿಯ ಗ್ರಾಮೀಣ ರಸ್ತೆಗಳೂ ದುಸ್ಥಿತಿಯಲ್ಲಿದೆ. ಭಾಗಮಂಡಲ-ಕರಿಕೆ ರಸ್ತೆ ಬಹುತೇಕ ಕಡೆಗಳಲ್ಲಿ ವಾಹನ ಸಂಚರಿಸಲು ಸಾಧ್ಯವಾಗದಂತಿದೆ. ಬಾಡಿಗೆ ವಾಹನದವರು ದುಡಿದಿದ್ದೆಲ್ಲಾ ರಿಪೇರಿಕೆ ಖರ್ಚು ಮಾಡುವಂತಾಗಿದೆ.
ಶ್ರೀನಾಥ್, ಆಟೋ ಚಾಲಕ, ಭಾಗಮಂಡಲ