

ಮಡಿಕೇರಿ: ಜಲ ಮತ್ತು ಮಣ್ಣು ಸಂರಕ್ಷಣೆಯ ಸಂದೇಶದೊಂದಿಗೆ ರೈಡ್ ಪಾರ್ ರೋಟರಿ ಹೆಸರಿನ ರೋಟರಿ ಬೈಕ್ ಜಾಥಾ ಜ.೨೪ ರಂದು ಮಡಿಕೇರಿಗೆ ಬರುತ್ತಿದ್ದು ವಿದೇಶಿಯರೂ ಸೇರಿದಂತೆ ಭಾರತೀಯ ಮೂಲದ ೪೦ ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ತಿಳಿಸಿದರು.
ರೋಟರಿ ಜಿಲ್ಲೆ ೩೧೮೧ ರ ಮಹತ್ವದ ಯೋಜನೆಯಾದ ರೈಡ್ ಫಾರ್ ರೋಟರಿಯ ೭ನೇ ಆವೃತ್ತಿಯು ತಮಿಳುನಾಡಿನ ಮಹಾಬಲಿಪುರಂನಿಂದ ಇದೇ ಭಾನುವಾರ ಪ್ರಾರಂಭಗೊಂಡಿದ್ದು ವಿವಿಧ ನಗರಗಳನ್ನು ಹಾದು ಜಾಥಾದಲ್ಲಿನ ಸವಾರರು ಜ.೨೪ ರಂದು ಮಂಗಳಪಾರ ಮಡಿಕೇರಿಗೆ ಬರುತ್ತಿದ್ದಾರೆ. ವಿದೇಶದ ೩೬ ಬೈಕ್ ಸವಾರರೂ ಒಳಗೊಂಡಂತೆ ೪೦ ಸವಾರರು ಜಾಥಾದಲ್ಲಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ಜಾಥಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಂದವ್ಯ ವದ್ದಿಗೆ ರೋಟರಿಗೆ ಸಹಕಾರಿಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.೨೪ ರಂದು ಮೇಕೇರಿಯ ಅಂಬರಾ ರೆಸಾರ್ಟ್‌ನಲ್ಲಿ ಮಡಿಕೇರಿ ರೋಟರಿ ಸಂಸ್ಥೆಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಬೈಕ್ ಸವಾರರಿಗೆ ಕೊಡಗು ಮತ್ತು ಕನ್ನಡನಾಡಿನ ಸಂಸ್ಕೃತಿ ಪರಿಚಯಿಸುವ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ರೋಟರಿ ಸಂಸ್ಥೆಗಳ ಧ್ವಜ ವಿನಿಯಮ ಕೂಡ ಕಾರ್ಯಕ್ರಮದ ವಿಶೇಷವಾಗಿದೆ ಎಂದು ತಿಳಿಸಿದರು.
ವರ್ಷದ ರೋಟರಿ ಜಿಲ್ಲಾ ಸಮ್ಮೇಳನ ಜ.೨೭ ರಿಂದ ೨೯ ರವರೆಗೆ ಮಂಗಳೂರಿನಲ್ಲಿ ಆಯೋಜಿತವಾಗಿದೆ. ಅಂದಾಜು ೨ ಸಾವಿರ ಸದಸ್ಯರು ಪಾಲ್ಗೊಳ್ಳುವ ಮೂಲಕ ರೋಟರಿಯ ಸಾಂಸ್ಕತಿಕ ವಿನಿಮಯಕ್ಕೆ ಸಾಕ್ಷಿಯಾಗಲಿದ್ದಾರೆ. ವಿದ್ಯಾಸಿರಿ, ವನಸಿರಿ, ಜಲಸಿರಿ, ಆರೋಗ್ಯ ಸಿರಿ ಎಂಬ ನಾಲ್ಕು ಮಹತ್ವದ ಜಿಲ್ಲಾ ಯೋಜನೆಗಳನ್ನು ಮಿಸ್ಟಿ ಹಿಲ್ಸ್ ಸಂಸ್ಥೆಯು ಅತ್ಯುತ್ತಮವಾಗಿ ಜಾರಿಗೊಳಿಸುತ್ತಿದೆ. ಜನಪರ ಕಾಳಜಿಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಪ್ರಕಾಶ್ ಕಾರಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ಜಿಲ್ಲಾ ರೋಟರಿ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್.ಎಚ್.ಟಿ, ಜಿಲ್ಲಾ ರೋಟರಿ ಸೇನಾನಿ ಅವಿಲ್ ಮೆನೇಜಸ್ ಹಾಜರಿದ್ದರು.