

ಮಡಿಕೇರಿ: ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ರೋಟರಿ ಜಿಲ್ಲೆ ೩೧೮೧ನ ಮಹತ್ವದ ಬೈಕ್ ಜಾಥಾ, ರೈಡ್ ಫಾರ್ ರೋಟರಿಗೆ ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಸಂಭ್ರಮದ ಸ್ವಾಗತ ಕೋರಲಾಯಿತು.
ಏಳನೇ ಆವೃತ್ತಿಯ ರೈಡ್ ಫಾರ್ ರೋಟರಿಯಲ್ಲಿ ಈ ವರ್ಷ ೧೬ ದೇಶಗಳ ೪೧ ಬೈಕ್ ಸವಾರರು ಪಾಲ್ಗೊಂಡಿದ್ದರು. ಮಡಿಕೇರಿ ರೋಟರಿ ಸಭಾಂಗಣದಲ್ಲಿ ರೋಟರಿ ಮಾಜಿ ಗವರ್ನರ್ ಡಾ.ರವಿ ಅಪ್ಪಾಜಿ, ರೋಟರಿ ವಲಯ ೬ರ ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿ ಅಧ್ಯಕ್ಷ ಕಾಂಡಂಡ ಕಾರ್ಯಪ್ಪ, ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ಅಂತರರಾಷ್ಟ್ರೀಯ ಸೇನಾ ಸಮಿತಿ ಅಧ್ಯಕ್ಷ ದೇವಣೀರ ಕಿರಣ್ ಸೇರಿದಂತೆ ರೋಟರಿ ಪ್ರಮುಖರು ರೈಡ್ ಫಾರ್ ರೋಟರಿ ತಂಡವನ್ನು ಸ್ವಾಗತಿಸಿದರು.
ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಫಲಕದೊಂದಿಗೆ ತಮ್ಮ ಜಾಥಾದ ಉದ್ದೇಶದ ಮಾಹಿತಿ ನೀಡಿದ ಸವಾರರು ತರುವಾಯ ಕಾಲೇಜು ರಸ್ತೆ, ರಾಜಾಸೀಟ್ ರಸ್ತೆಗಾಗಿ ಮೇಕೇರಿ ಗ್ರಾಮಕ್ಕೆ ತೆರಳಿದರು.
ಈ ಸಂದರ್ಭ ಮಾತನಾಡಿದ ನ್ಯೂಯಾರ್ಕ್‌ನ ಜೈನ್ಸಿ ಕ್ಲೇವರ್ಡ್, ಭಾರತ ಅತ್ಯಂತ ಸುಂದರವಾದ ಪ್ರಾಕೃತ್ತಿಕ ಶ್ರೀಮಂತಿಕೆಯ ದೇಶವಾಗಿದೆ. ಅದರಲ್ಲಿಯೂ ದಕ್ಷಿಣ ಭಾರತದ ಹಲವು ಪ್ರದೇಶಗಳು ಅತ್ಯಂತ ರಮಣೀಯವಾಗಿದ್ದು ಮನಸ್ಸಿಗೆ ಸಂತೋಷ ತಂದಿದೆ. ಭಾರತದಲ್ಲಿ ಹಿಂದೆಂದಿಗಿಂತಲೂ ಈಗ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತಿರುವುದು ಸಮಧಾನದ ಅಂಶ. ಜಗತ್ತಿನ ಪ್ರತೀ ಜೀವಿಯೂ ನೀರು ಮತ್ತು ಮಣ್ಣಿನ ರಕ್ಷಣೆಗೆ ಪ್ರತೀಯೋರ್ವರೂ ಪಣ ತೊಡಬೇಕಾಗಿರುವುದು ಕರ್ತವ್ಯವಾಗಿದೆ ಎಂದು ಹೇಳಿದರು.
ಕಳೆದ ೭ ಆವೃತ್ತಿಗಳಿಂದಲೂ ರೈಡ್ ಫಾರ್ ರೋಟರಿಗೆ ಮಾರ್ಗದರ್ಶಕರಾಗಿರುವ ರಾಘವೇಂದ್ರ ಯಾರಂಗಲ್ ಮಾತನಾಡಿ, ಜ೧೫ ರಂದು ತಮಿಳುನಾಡಿನ ಮಹಾಬಲೀಪುರಂನಲ್ಲಿ ರೈಡ್ ಫಾರ್ ರೋಟರಿಯ ಜಾಥಾ ಆರಂಭವಾಗಿ ತಮಿಳುನಾಡು, ಆಂಧ್ರ ಮೂಲಕ ಕರ್ನಾಟಕ ಪ್ರವೇಶಿಸಿದೆ. ಜ೨೭ ರಂದು ಮಂಗಳೂರಿನಲ್ಲಿ ಆಯೋಜಿತ ರೋಟರಿ ಜಿಲ್ಲಾ ಸಮಾವೇಶದಲ್ಲಿ ಸಮಾಪನಗೊಳ್ಳಲಿದೆ. ಈ ವರ್ಷವೂ ರೋಟರಿಯ ಮಹತ್ವದ ಯೋಜನೆ ರೈಡ್ ಫಾರ್ ರೋಟರಿಗೆ ಅತ್ಯುತ್ತಮ ಸ್ಪಂದನೆ ದೊರಕಿದೆ ಎಂದರು.
ರೋಟರಿ ಸಹಾಯಕ ಗವನರ್ ಕೆ.ಎಸ್.ರತನ್ ತಮ್ಮಯ್ಯ ಮಾತನಾಡಿ, ಕಾಫಿ ಕರಿಮೆಣಸು ಬೆಳೆಗಳ ಕೊಡಗನ್ನು ವಿದೇಶಿ ಪ್ರತಿನಿಧಿಗಳು ಅಪಾರವಾಗಿ ಮೆಚ್ಚಿದ್ದು ರೋಟರಿ ಮೂಲಕ ಕೊಡಗಿನ ಆತಿಥ್ಯವನ್ನು ಮತ್ತೊಮ್ಮೆ ರೋಟರಿ ಮೂಲಕ ಪರಿಚಯಿಸಿದ್ದೇವೆ. ಕೊಡಗಿನ ಹಲವು ರೋಟರಿ ಸದಸ್ಯರು ತಮ್ಮ ಸಂಸ್ಥೆಗಳ ಧ್ವಜಗಳನ್ನು ವಿದೇಶಿ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ವಿದೇಶದ ರೋಟರಿ ಸಂಸ್ಥೆಗಳ ಅನೇಕ ಯೋಜನೆಗಳಿಗೆ ರೈಡ್ ಫಾರ್ ರೋಟರಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ಮಡಿಕೇರಿ ನಗರ ಸಂಚಾರಿ ಪೊಲೀಸರು ರೈಡ್ ಫಾರ್ ರೋಟರಿ ಜಾಥಾದಲ್ಲಿ ಸಂಚಾರ ಜಾಗ್ರತಿಯ ಮಾಹಿತಿ ನೀಡಿ ಗಮನ ಸೆಳೆದರು. ೧೨ ಮಹಿಳಾ ಬೈಕ್ ಸವಾರರೂ ರೈಡ್ ಫಾರ್ ರೋಟರಿಯಲ್ಲಿ ಪಾಲ್ಗೊಂಡಿದ್ದರು. ಮಡಿಕೇರಿ ಮುಖ್ಯರಸ್ತೆಯಲ್ಲಿ ಸಾಗಿದ ರೈಡ್ ಫಾರ್ ರೋಟರಿ ನೂರಾರು ಸಾರ್ವಜನಿಕರ ಗಮನ ಸೆಳೆಯಿತು.