

ಗುರುಪುರ: ಪೊಳಲಿ ಸೇತುವೆಯಿಂದ ಬುಧವಾರ ಮಧ್ಯರಾತ್ರಿ ಫಲ್ಗುಣಿ ನದಿಗೆ ಹಾರಿದ್ದ ವಾಮದಪದವಿಗೆ ಹತ್ತಿರದ ಕುಕ್ಕಿಪಾಡಿಯ ನಿವಾಸಿ, ರಿಕ್ಷಾ ಚಾಲಕ ಗಿರೀಶ್ ಎಂಬಾತನ ಶವ ಶುಕ್ರವಾರದಂದು ಅಡ್ಡೂರಿಗೆ ಹತ್ತಿರ ಅಳಕೆ ಎಂಬಲ್ಲಿ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಅಡ್ಡೂರಿನ ಅಕ್ಬರ್ ಮತ್ತು ಅವರ ಗೆಳೆಯರು ಬೋಟ್ ಬಳಸಿ ಗಿರೀಶ್ ಶವ ಪತ್ತೆಗಾಗಿ ನಿನ್ನೆಯಿಂದಲೇ ಭಾರಿ ಪ್ರಯತ್ನ ಮುಂದುವರಿಸಿದ್ದರು. ಬಜ್ಪೆ ಪೊಲೀಸರು ಮಹಜರು ನಡೆಸಿದ್ದು, ನಾಪತ್ತೆ ದೂರು ದಾಖಲಾಗಿರುವ ಪುಂಜಾಲಕಟ್ಟೆ ಠಾಣಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಬುಧವಾರ ರಾತ್ರಿ ಬಾಡಿಗೆ ಇದೆ ಎಂದು ಮನೆಯಿಂದ ತನ್ನ ರಿಕ್ಷಾದಲ್ಲಿ ಹೊರಟಿದ್ದ ಗಿರೀಶ್(35) ಪೊಳಲಿ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ನದಿಗೆ ಹಾರಿದ್ದ. ಸೇತುವೆ ಮೇಲೆ ನಿಂತಿದ್ದ ಅನಾಥ ರಿಕ್ಷಾ ಗಸ್ತಿನಲ್ಲಿದ್ದ ಪೊಲೀಸರು ತಪಾಸಣೆಗೈದಾಗ ವ್ಯಕ್ತಿಯೊಬ್ಬ ನದಿಗೆ ಹಾರಿರುವುದು ಬೆಳಕಿಗೆ ಬಂದಿತ್ತು.