

ಮಂಡ್ಯ: ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ವಯ ಅಕ್ಕಿ ಕೊಡಲು ಸಾಧ್ಯವಾಗದೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಬಡವರಿಗೆ ನೀಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಅಕ್ಕಿ ಕೊಡದೆ ಹಿನ್ನೆಲೆಯಲ್ಲಿ ನಾವು ಛತ್ತೀಸ್‌ಗಡ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಖರೀದಿ ಮಾಡಿ ರೈತರಿಗೆ ಹಂಚುತ್ತೇವೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಇದರಿಂದ ಬೇರೆ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಟ್ಟಂತಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ನಿಜವಾಗಿಯೂ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರಕ್ಕೆ ಇದ್ದರೆ ನಮ್ಮ ರಾಜ್ಯದ ರೈತರಿಂದಲೇ ಭತ್ತ ಖರೀದಿಸಿ ಅಕ್ಕಿ ಮಾಡಿ ಬಡವರಿಗೆ ಹಂಚಬಹುದಲ್ಲವೇ?. ಅದನ್ನು ಬಿಟ್ಟು ದೂರದ ಛತ್ತೀಸ್‌ಗಢದಿಂದ ದುಬಾರಿ ಬೆಲೆಗೆ ಖರೀದಿ ಮಾಡುವಂತಹ ಪ್ರಮೇಯವಾದರೂ ಏನಿದೆ. ರಾಜ್ಯದ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಈ ಹಿಂದೆ ಕಾಂಗ್ರೆಸ್ಸಿಗರು ರಾಜಕೀಯ ಮಾಡಿದ್ದರಿಂದಾಗಿ ಇಂದು ಕೇರಳ, ತೆಲಂಗಾಣ ಸೇರಿದಂತೆ ಕೆಲ ರಾಜ್ಯಗಳು ತಿರಸ್ಕರಿಸಿವೆ. ಇದರಿಂದಾಗಿ ನಮ್ಮ ರಾಜ್ಯದ ಹಾಲು ಉತ್ಪಾದಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರವೇ ಜಾಗತೀಕರಣಕ್ಕೆ ಸಹಿ ಮಾಡಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅವರೇ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ನಂದಿನಿ ಮಾರಾಟದಲ್ಲೂ ಅಡ್ಡಗಾಲು ಹಾಕಿದ್ದಾರೆ. ಇದರಿಂದ ನಮ್ಮ ರಾಜ್ಯದ ರೈತರೇ ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಕೇಂದ್ರ ಸರ್ಕಾರವೇ ಉಚಿತವಾಗಿ ಪ್ರತಿಯೊಬ್ಬರಿಗೂ 5 ಕೆ.ಜಿ ಅಕ್ಕಿ ಕೊಡುತ್ತಿದೆ. ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ 10 ಕೆ.ಜಿ ಅಂದರೆ ಒಟ್ಟಾರೆ 15 ಕೆ.ಜಿ ಉಚಿತವಾಗಿ ಅಕ್ಕಿ ಕೊಡಬೇಕು. ದಿನಕ್ಕೊಂದು ನೆಪ ಹೇಳುವ ಬದಲು ಪಡಿತರದಾರರ ಖಾತೆಗೆ ಹಣ ಹಾಕಿದಲ್ಲಿ ಅವರಿಗೆ ಬೇಕಾದ ಅಕ್ಕಿ ಅಥವಾ ಬೇರೆ ಆಹಾರ ಪದಾರ್ಥಗಳನ್ನೇ ಖರೀದಿಸುತ್ತಾರೆ. ಬಿಜೆಪಿ ಪಕ್ಷ ಬಡವರ ಹೆಸರಿನಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ. ಈ ನಡುವೆ ಕಾಂಗ್ರೆಸ್ಸಿಗರು ಜು.20ರಂದು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.