ಭತ್ತದ ಹುಲ್ಲಿಗೆ ನಿರೀಕ್ಷೆಗೂ ಮೀರಿ ದರ ಏರಿಕೆ

SRS HULLLU
Published on

ಶಿರಸಿ: ಭತ್ತದ ಬೆಳೆ ಕ್ಷೇತ್ರ ಕ್ಷೀಣಿಸಿದ ಹಿನ್ನೆಲೆ ಹಾಗೂ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದ ಕಾರಣ ಭತ್ತದ ಹುಲ್ಲಿಗೆ ನಿರೀಕ್ಷೆಗೂ ಮೀರಿ ದರ ಏರಿಕೆಯಾಗುತ್ತಿದೆ. ಭತ್ತ ಬೆಳೆಗಾರರಿಗೆ ತುಸು ನೆಮ್ಮದಿ ತಂದಿದ್ದರೆ, ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ.

ತಾಲೂಕಿನ ದಾಸನಕೊಪ್ಪ ಮತ್ತು ಬನವಾಸಿ ಹೋಬಳಿಯನ್ನು ತಾಲೂಕಿನ ಭತ್ತದ ಕಣಜ ಎಂದೇ ಕರೆಯಲಾಗುತ್ತಿತ್ತು. ಇಲ್ಲಿ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ನವೆಂಬರ್, ಡಿಸೆಂಬರ್‌ನಲ್ಲಿ ಸಂಪೂರ್ಣ ಬನವಾಸಿ, ದಾಸನಕೊಪ್ಪದ ರೈತರೆಲ್ಲ ಭತ್ತ ಕಟಾವಿನ ಕಾರ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು. ಆ ಬಳಿಕ ಒಂದಿಷ್ಟು ವ್ಯಾಪಾರಸ್ಥರು ಈ ರೈತರಿಂದ ಭತ್ತದ ಹುಲ್ಲು ಖರೀದಿಸಿ ಮಲೆನಾಡಿನ ಹೈನುಗಾರರಿಗೆ ಮಾರಾಟ ಮಾಡುತ್ತಿದ್ದರು. ಪ್ರತಿ ದಿನ ಮುಂಜಾನೆ ಬನವಾಸಿ ಮತ್ತು ಹುಬ್ಬಳ್ಳಿ ರಸ್ತೆಯಲ್ಲಿ ಹುಲ್ಲು ಹೊತ್ತ ಟ್ರಾೃಕ್ಟರ್‌ಗಳು ಸಾಲಾಗಿ ಸಾಗುತ್ತಿರುವುದು ಕಂಡುಬರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಬನವಾಸಿ ಹೋಬಳಿಯ ಕೃಷಿ ಚಿತ್ರಣ ಬದಲಾಗಿದೆ. ಭತ್ತದ ಕ್ಷೇತ್ರಗಳಲ್ಲೆಲ್ಲ ಬೋರ್ ಕೊರೆಸಿ ನೀರು ಸಿಕ್ಕಲ್ಲೆಲ್ಲ ಅಡಕೆ ತೋಟಗಳು ತಲೆ ಎತ್ತಿವೆ. ಸಂಪಖಂಡ, ಹುಲೇಕಲ್ ಹೋಬಳಿಯ ಸಾಂಪ್ರದಾಯಿಕ ಅಡಕೆ ಬೆಳೆಗಾರರಿಗಿಂತ ಜಾಸ್ತಿ ಅಡಕೆಯನ್ನು ಬನವಾಸಿ ಭಾಗದ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ.

ಕಳೆದ ನಾಲ್ಕಾರು ವರ್ಷಗಳ ಹಿಂದೆ ಬನವಾಸಿ ಭಾಗದ ಭತ್ತದ ಹುಲ್ಲು ಕಡಿಮೆ ದರಕ್ಕೆ ಸಿಗುತ್ತಿತ್ತು. ಪ್ರತಿ ಪಿಂಡಿ ಹುಲ್ಲಿಗೆ 25ರಿಂದ 30 ರೂ. ದರವಿದ್ದರೆ ಇಂದು ಅದೇ ಆಕಾರದ ಹುಲ್ಲಿನ ಪಿಂಡಿಗೆ 45ರಿಂದ 50 ರೂ. ದರವಾಗಿದೆ. ತಾಲೂಕಿನಲ್ಲಿ ವಾರ್ಷಿಕ ಸರಾಸರಿ 10 ಸಾವಿರ ಲಾರಿಗಳಿಗೂ ಅಧಿಕ ಹುಲ್ಲು ಹೈನುಗಾರಿಕೆಗೆ ಬಳಕೆ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಬೇಡಿಕೆ ಇದ್ದಷ್ಟು ಹುಲ್ಲೂ ಉತ್ಪಾದನೆ ಆಗುತ್ತಿದ್ದ ಕಾರಣ ಹೈನುಗಾರರು ಸಮಸ್ಯೆ ಎದುರಿಸಿರಲಿಲ್ಲ. ಆದರೆ, ಕಳೆದ ಕೆಲ ವರ್ಷಗಳಲ್ಲಿ ಈ ಸಮೀಕರಣ ತಲೆಕೆಳಗಾಗಿದೆ. ಹುಲ್ಲಿಗೆ ದರ ಜಾಸ್ತಿಯಾಗಿ ಪೂರೈಕೆಯೂ ಕಡಿಮೆ ಆಗಿದೆ.

ಮಲೆನಾಡಿನ ಹೈನುಗಾರರಿಗೆ ದೀಪಾವಳಿವರೆಗೂ ಮೇವಿನ ಸಮಸ್ಯೆ ಉಂಟಾಗುವುದಿಲ್ಲ. ಮನೆ ಸುತ್ತ ಮುತ್ತ ಮತ್ತು ಕರಡದ ಬೇಣಗಳಲ್ಲಿ ಬೆಳೆಯುವ ಹಸಿ ಹುಲ್ಲನ್ನೇ ಅವರು ಮೇವಾಗಿ ಬಳಸಿಕೊಳ್ಳುತ್ತಾರೆ. ಆದರೆ, ದೀಪಾವಳಿ ಬಳಿಕ ಮಳೆ ಕಡಿಮೆ ಆಗಿ ಕರಡದ ಹುಲ್ಲು ಒಣಗಲಾರಂಭಿಸಿದ ಬಳಿಕ ಹೈನುಗಾರಿಕೆಗೆ ಭತ್ತದ ಹುಲ್ಲು ಅನಿವಾರ್ಯ. ಒಂದು ಹಸುವಿಗೆ ವಾರ್ಷಿಕ 300ರಿಂದ 400 ಕಟ್ಟು ಹುಲ್ಲು ಬೇಕಾಗುತ್ತದೆ. ಹಾಲಿನ ಗುಣಮಟ್ಟ ಹೆಚ್ಚಿಸಲು ಜಾನುವಾರುಗಳಿಗೆ ಭತ್ತದ ಒಣಹುಲ್ಲು ನೀಡುವುದು ಅನಿವಾರ್ಯ. ಬೆಲೆ ಏರಿಕೆಯಿಂದ ಹೈನುಗಾರರ ಆದಾಯಕ್ಕೂ ಈಗ ಹೊಡೆತವಾಗಿದೆ.

ಇನ್ನೊಂದೆಡೆ ಬೇಸಾಯ, ರಸಗೊಬ್ಬರ, ಆಳು ಕಾಳಿನ ಕೆಲಸ ಎಲ್ಲ ಸೇರಿ ಭತ್ತದ ಗದ್ದೆ ಮಾಡಿದರೆ ಏನೂ ಗಿಟ್ಟುವುದಿಲ್ಲ. ಬಹುತೇಕ ಭತ್ತದ ಗದ್ದೆಗಳು ಅಡಕೆ, ಅನಾನಸ್, ಶುಂಠಿ ತೋಟಗಳಾಗಿ ಬದಲಾಗಿವೆ. ಸಾಂಪ್ರದಾಯಿಕ ಕೃಷಿ, ಭತ್ತದ ಬೆಳೆಯನ್ನು ಇತ್ತೀಚೆಗೆ ಕಡೆಗಣಿಸಲಾಗುತ್ತಿದೆ. ಇದು ಹುಲ್ಲಿನ ದರ ಏರಿಕೆಗೆ ಕಾರಣದಲ್ಲೊಂದು ಎನ್ನುತ್ತಾರೆ ಬನವಾಸಿ ಭಾಗದ ರೈತರು. ಆದರೆ, ಈ ವರ್ಷ ಅತಿಯಾದ ಮಳೆಯಿಂದ ಭತ್ತದ ಬೆಳೆ, ಹುಲ್ಲಿಗೆ ಸಮಸ್ಯೆ ಆಗಿದೆ. ಕಟಾವು ಸಂದರ್ಭದಲ್ಲಿ ಅಕಾಲಿಕ ಮಳೆ ಬಂದ ಕಾರಣ ಭತ್ತ, ಹುಲ್ಲು ಕೂಡ ಮುಗ್ಗಲು ಹಿಡಿದು ನಷ್ಟವಾಗಿತ್ತು. ಹೀಗಾಗಿ ಮಳೆಗೆ ಸಿಗದೆ ಉತ್ತಮವಾಗಿರುವ ಭತ್ತದ ಹುಲ್ಲಿಗೆ ವಿಪರೀತ ಬೇಡಿಕೆ ಬಂದಿದೆ ಎನ್ನುತ್ತಾರೆ ಕೃಷಿಕ ಮಹೇಶ ನಾಯ್ಕ. ಬನವಾಸಿ ಭಾಗದಲ್ಲಿ ಈ ವರ್ಷ ಶುಂಠಿ ಬೆಳೆಯನ್ನೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಶುಂಠಿಯನ್ನು ಭೂಮಿಗೆ ಬಿತ್ತಿದ ಕೂಡಲೆ ಭೂಮಿಯ ಮೇಲ್ಪದರಿಗೆ ಭತ್ತದ ಹುಲ್ಲು ಹಾಸಲಾಗುತ್ತದೆ. ಒಂದು ಎಕರೆಗೆ ಕನಿಷ್ಠ 100ರಿಂದ 150 ಪಿಂಡಿ ಹುಲ್ಲಿನ ಅಗತ್ಯತೆ ಇದೆ. ಹಾಗಾಗಿ, ನೂರಾರು ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯುವವರಿಗೆ ಹೆಚ್ಚು ಹುಲ್ಲಿನ ಅವಶ್ಯಕತೆ ಇದೆ. ಇದು ಕೂಡ ಹುಲ್ಲಿನ ಬೇಡಿಕೆ ಮತ್ತು ದರ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಹಲವು ರೈತರು.

ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ರೈತರು ಭತ್ತದ ಬದಲು ಅಡಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿ 2017-16ರಲ್ಲಿ 8829 ಹೆಕ್ಟೇರ್ ಭತ್ತ ಬೆಳೆಯುವ ಕ್ಷೇತ್ರ ಇದ್ದಿದ್ದರೆ ಈಗ 7097 ಹೆಕ್ಟೇರ್‌ಗೆ ಕುಸಿತವಾಗಿದೆ. ಅಡಕೆ ಬೆಳೆ ತಾಲೂಕಿನಲ್ಲಿ 2017-18ರಲ್ಲಿ 6016 ಹೆಕ್ಟೇರ್ ಇದ್ದುದು ಈಗ 10585 ಹೆಕ್ಟೇರ್‌ಗೆ ಏರಿಕೆ ಆಗಿದೆ. ಬನವಾಸಿ, ದಾಸನಕೊಪ್ಪ ಭಾಗದಲ್ಲಿಯೇ ರೈತರು ಅಧಿಕ ಪ್ರಮಾಣದಲ್ಲಿ ಅಡಕೆಯತ್ತ ಸಾಗಿದ್ದಾರೆ. - ಗಣೇಶ ಹೆಗಡೆ, ಸಹಾಯಕ ತೋಟಗಾರಿಕೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net